ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಿವೇಶನ ರಹಿತ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನಿವೇಶನಗಳನ್ನು ಹರಾಜು ಮಾಡುವ ಮತ್ತು ಒದಗಿಸುವ ನಿಟ್ಟಿನಲ್ಲಿ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಉಳಿದಿರುವ ನಿವೇಶನಗಳನ್ನು ಹರಾಜು ಮಾಡಲು ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆಯ ಕರೂರಿನಲ್ಲಿ 'ದೂಡ' ವತಿಯಿಂದ ಹೊಸ ಲೇಔಟ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಈ ನೂತನ ಬಡಾವಣೆಯನ್ನು 200 ಎಕರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಶಾಸಕರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾಗ್ದಾಳಿ: ಇದೇ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹಾಗೂ ತಮ್ಮ ನಡುವೆ ನಡೆಯುತ್ತಿರುವ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶಾಸಕರು ರೈತರನ್ನು ದಿಕ್ಕು ತಪ್ಪಿಸಬಾರದು ಎಂದರು. ರೈತರಿಗೆ ನೀರು ಬಿಡುವ ಬಗ್ಗೆ ವಾಸ್ತವ ಸಂಗತಿಯನ್ನು ತಿಳಿಸಬೇಕು ಮತ್ತು ಸಭೆಗಳಿದ್ದಾಗ ಅಲ್ಲಿ ಬಂದು ಮಾತನಾಡಬೇಕು ಎಂದು ಕಿಡಿಕಾರಿದರು.
ರೈತರ ಮೇಲೆ ಸಚಿವರು ರೇಗಾಡಿದ್ದಾರೆ ಎಂದು ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸುವುದು ಶಾಸಕರ ಜವಾಬ್ದಾರಿ. ಐಸಿಸಿ ಸಭೆಯಲ್ಲಿ ಕುಳಿತು ವಾಸ್ತವಿಕವಾಗಿ ಮಾತನಾಡಬೇಕು. ಸಭೆಗೆ ಬಂದಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹಾಗೂ ನೀರಾವರಿ ತಜ್ಞ ನರಸಿಂಹಪ್ಪ ಅವರೂ ಏನೂ ಮಾತನಾಡಲಿಲ್ಲ. ಸಚಿವರು ಬರುತ್ತಾರೆ ಅವರನ್ನೇ ಕೇಳಿ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.
ಈ ಸಭೆಯಲ್ಲಿ 'ದೂಡ' ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ, ಎಸ್ಪಿ ಎಚ್.ಟಿ. ಶೇಖರ್ ಹಾಗೂ ದೂಡ ಕಮಿಷನರ್ ರೇಣುಕಾ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.




