ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನತಾದಳ (ಜಾತ್ಯತೀತ) ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಘಟನಾ ಚಟುವಟಿಕೆಗಳಿಗೆ ವೇಗ ನೀಡಲು ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಹತ್ವದ ಸಭೆ ನಡೆಸಲಾಯಿತು.
ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು ಭಾಗವಹಿಸಿದ್ದರು.
ಪಕ್ಷದ ಬಲವರ್ಧನೆ: ಜಿಲ್ಲಾ ಮಟ್ಟದಲ್ಲಿ ಪಕ್ಷದ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಸಂಘಟನಾ ಚಟುವಟಿಕೆಗಳ ಪರಿಶೀಲನೆ: ಪ್ರಸ್ತುತ ಜಿಲ್ಲಾವಾರು ನಡೆಯುತ್ತಿರುವ ಪಕ್ಷದ ಕೆಲಸ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಪದಾಧಿಕಾರಿಗಳ ನೇಮಕ: ಖಾಲಿ ಇರುವ ಸ್ಥಾನಗಳಿಗೆ ಸಮರ್ಥ ಪದಾಧಿಕಾರಿಗಳ ನೇಮಕ ಹಾಗೂ ಹೊಸ ಜವಾಬ್ದಾರಿಗಳ ಹಂಚಿಕೆ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಶಾಸಕ ಜಿ.ಕೆ. ವೆಂಕಟಶಿವರೆಡ್ಡಿ, ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಹಾಗೂ ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷರು, ಮಾಜಿ ಶಾಸಕ ಹಾಗೂ ಬೆಂಗಳೂರು ಉತ್ತರ ವಲಯದ ಅಧ್ಯಕ್ಷ ಇ.ಕೃಷ್ಣಪ್ಪ, ಮಾಜಿ ಶಾಸಕ ನಿಂಗಪ್ಪ ಸೇರಿದಂತೆ ಸಭೆಯಲ್ಲಿ ರಾಜ್ಯಜ ವಿವಿಧ ಜಿಲ್ಲಾ ಅಧ್ಯಕ್ಷರು ಪಾಲ್ಗೊಂಡು, ತಮ್ಮ ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಬೇಕಾದ ಹೋರಾಟಗಳ ಬಗ್ಗೆ ವರದಿ ಸಲ್ಲಿಸಿದರು. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಮುಂಚೂಣಿಗೆ ತರಲು ಒಗ್ಗಟ್ಟಿನಿಂದ ಶ್ರಮಿಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.


