ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷದ ಪ್ರಭಾವ ಹಾಗೂ ಅಧಿಕಾರಿಗಳ ಕರ್ತವ್ಯಲೋಪದಿಂದ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಈ ಅಕ್ರಮಗಳನ್ನು ತಡೆಯಲು ವಿನೂತನ ಹೆಜ್ಜೆ ಇಟ್ಟಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಂಡುಬರುವ ಯಾವುದೇ ರೀತಿಯ ಅಕ್ರಮಗಳನ್ನು ನೇರವಾಗಿ ಪಕ್ಷದ ಗಮನಕ್ಕೆ ತರಲು ಅವರು ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ನಾಡಿನ ಸಮಸ್ತ ನಾಗರಿಕರಿಗೆ ಮುಕ್ತ ಮನವಿ ಮಾಡಿದ್ದಾರೆ.
ಅಕ್ರಮ ಕಂಡರೆ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ: 6362886303"ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮಗಳು, ನಿಯಮ ಉಲ್ಲಂಘನೆ ಅಥವಾ ರಾಜಕೀಯ ಪ್ರೇರಿತ ಸೇರ್ಪಡೆ/ಕೈಬಿಡುವಿಕೆಗಳು ಕಂಡುಬಂದರೆ ತಕ್ಷಣವೇ ಈ ವಾಟ್ಸಾಪ್ ಸಂಖ್ಯೆಗೆ ಮಾಹಿತಿಯನ್ನು ಕಳುಹಿಸಿಕೊಡಿ," ಎಂದು ನಿಖಿಲ್ ಕುಮಾರಸ್ವಾಮಿ ಕೋರಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು:
ಸಾರ್ವಜನಿಕರು ಹಾಗೂ ಕಾರ್ಯಕರ್ತರು ನೀಡುವ ದೂರುಗಳು ಮತ್ತು ಸಾಕ್ಷ್ಯಗಳನ್ನು ಕ್ರೋಢೀಕರಿಸಿ, ಅವುಗಳನ್ನು ನೇರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ಆ ಮೂಲಕ ಕಾನೂನು ಹೋರಾಟ ನಡೆಸಿ ನ್ಯಾಯ ಒದಗಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
"ಬನ್ನಿ, ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಮತ್ತು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಲು ನಾವೆಲ್ಲರೂ ಕೈಜೋಡಿಸೋಣ," ಎಂದು ನಿಖಿಲ್ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡಿದ್ದಾರೆ.
ಇತ್ತೀಚೆಗಷ್ಟೇ ರಾಮನಗರ ಮತ್ತು ಕುಣಿಗಲ್‌ನಲ್ಲಿ ಬಿಎಲ್‌ಒ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.



