ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
'ದಿ ಫೈಲ್' ಸುದ್ದಿ ಪೋರ್ಟಲ್ನ ಸಂಪಾದಕ ಜಿ. ಮಹಂತೇಶ್ ಅವರಿಗೆ ವಾಟ್ಸಾಪ್ ಕರೆಯ ಮೂಲಕ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಲೇಔಟ್ ಪೊಲೀಸರು ಅಂತಿಮವಾಗಿ ಎಫ್ಐಆರ್ ದಾಖಲಿಸಿದ್ದಾರೆ.
ಖಾಸಗಿ ಟ್ರಸ್ಟ್ ಒಂದರ ಕುರಿತು ವೆಬ್ಸೈಟ್ ಪ್ರಕಟಿಸಿದ್ದ ಎರಡು ವರದಿಗಳಿಗೆ ಸಂಬಂಧಿಸಿದಂತೆ ಈ ಬೆದರಿಕೆಗಳನ್ನು ಒಡ್ಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗುರುವಾರ ದೂರು ಸ್ವೀಕರಿಸಿದ್ದ ನಂದಿನಿ ಲೇಔಟ್ ಪೊಲೀಸರು ಆರಂಭದಲ್ಲಿ ಕೇವಲ ಎನ್ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಅಪರಿಚಿತ ವ್ಯಕ್ತಿಯ ವಿರುದ್ಧ ಕೇವಲ ಎನ್ಸಿಆರ್ ಮೂಲಕ ಕ್ರಮ ಕೈಗೊಂಡಿದ್ದಕ್ಕಾಗಿ ಗೃಹ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಸೇರಿದಂತೆ ಹಲವು ಪ್ರಮುಖ ನಾಯಕರು ಸರ್ಕಾರದ ಈ ಧೋರಣೆಯನ್ನು ತೀವ್ರವಾಗಿ ಟೀಕಿಸಿದ್ದರು. ಇದರೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಹ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ತೀವ್ರಂಡನೆ ವ್ಯಕ್ತಪಡಿಸಿತ್ತು.
ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲು:
ವಿರೋಧ ಪಕ್ಷಗಳ ತೀವ್ರ ಟೀಕೆ ಹಾಗೂ ವ್ಯಾಪಕ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಅಧಿಕೃತವಾಗಿ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಲಾದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ತನಿಖೆ ಆರಂಭಿಸಿರುವ ಪೊಲೀಸರು, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 352 (ಶಾಂತಿ ಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಹಾಗೂ ಬಿಎನ್ಎಸ್ ಸೆಕ್ಷನ್ 351(3) (ಗಂಭೀರ ಹಾನಿ, ಸಾವು ಅಥವಾ ಆಸ್ತಿಗೆ ಭಾರಿ ಹಾನಿ ಉಂಟುಮಾಡುವ ಬೆದರಿಕೆಗಳನ್ನು ಒಳಗೊಂಡಿರುವ ತೀವ್ರ ಸ್ವರೂಪದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




