ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಗತ್ತಿನ ಪ್ರಸಿದ್ದ ಮೈಸೂರು ದಸರಾ ಉತ್ಸವ-2024ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 03 ರಿಂದ 11 ರವರೆಗೆ “ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2024”ನ್ನು ಮೈಸೂರಿನ ಹಳೆ ಡಿ.ಸಿ. ಕಚೇರಿ ಎದುರು, ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಲಾಗುವುದು.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು / ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ 1000 ರೂ.ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು - ಅವರ ಹೆಸರಿನಲ್ಲಿ ಡಿಡಿಗಳನ್ನು ಸಲ್ಲಿಸುವುದು.
ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರಿನ ಕಛೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಗಳಲ್ಲಿ ಅಥವಾ https://kpp.karnataka.gov.in ಪಡೆದುಕೊಳ್ಳಬಹುದಾಗಿದೆ.
ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಸೆಪ್ಟೆಂಬರ್ 30ರ ಸಂಜೆ 5.00 ಗಂಟೆಗೆ ಒಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ [email protected] ಮೂಲಕ ಸಲ್ಲಿಸುವುದು. ನಿರ್ಮಿಸಲಾಗುವ 60 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಹಾಗೂ ದೂರವಾಣಿ ಸಂ.080-22484516 / 22107704 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


