ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆ ನಡೆಯಿತು.
ಸಭೆಯಲ್ಲಿ ನಗರಸಭಾ ಸದಸ್ಯ,ಕನ್ನಡಪರ ಹಿರಿಯ ಹೋರಾಟಗಾರ ತ. ನ. ಪ್ರಭುದೇವ್ ಮಾತನಾಡಿ ನಗರದ ೩೧ ವಾರ್ಡ್ ಗಳಲ್ಲಿಯೂ ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಕೆಲಸ ಮಾಡಬೇಕು. ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಸಾಹಿತಿಗಳು, ಬರಹಗಾರರು, ಕವಿಗಳು, ಸೇರಿದಂತೆ ಕನ್ನಡಿಗರ ಸಾಧನೆಗಳನ್ನೊ ಳಗೊಂಡ ಪುಸ್ತಕಗಳನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ವಿತರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಕನ್ನಡ ಪರ ಹೋರಾಟಗಾರ ಸಂಜೀವನಾಯಕ್ ಮಾತನಾಡಿ ತಾಲ್ಲೂಕಿನ ಎಲ್ಲಾ ಕನ್ನಡ ಪರ ಹೋರಾಟಗಾರರು ಸಭೆ ನಡೆಸಿ, ನಗರದಲ್ಲಿರುವ ಆಂಗ್ಲಭಾಷೆಯ ನಾಮಫಲಕಗಳನ್ನು ತೆಗೆದುಹಾಕುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿ, ನವೆಂಬರ್ ತಿಂಗಳಲ್ಲಿಯೇ ತೆರವು ಮಾಡಲು ಮುಂದಾಗಬೇಕು. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಕಡ್ಡಾಯವಾಗಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡ ಪರ ಹೋರಾಟಗಾರ ಎ. ನಂಜಪ್ಪ ಮಾತನಾಡಿ ಕನ್ನಡಪರ ಸಂಘಟನೆಗಳು ಕಟ್ಟುವ ಬ್ಯಾನರ್ ಗಳನ್ನು ಎರಡು ಮೂರು ದಿನಗಳಲ್ಲಿ ತೆಗೆದುಹಾಕುವ ನಗರಸಭೆ ಅಧಿಕಾರಿಗಳು ರಾಜಕಾರಣಿಗಳ ಬ್ಯಾನರ್ ಗಳನ್ನು 15 ದಿನಗಳಾದರೂ ಮುಟ್ಟುವುದಿಲ್ಲ ಏಕೆ... ಎಂದು ಪ್ರಶ್ನಿಸಿದರು ಹಾಗೂ ಇತ್ತೀಚಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ಕನ್ನಡ ಮಾಯವಾಗುತ್ತಿದೆ ಬರು ಬರುತ್ತಾ ಸಂಪೂರ್ಣ ಇಂಗ್ಲಿಷ್ ಮಯವಾಗುವುದರಲ್ಲಿ ಸಂಶಯವಿಲ್ಲ.ಇದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿ ಮಳೆ ಬರುವ ಸಾಧ್ಯತೆ ಇರುವುದರಿಂದ ಬಯಲು ಪ್ರದೇಶದಲ್ಲಿ ಮಾಡುವ ಬದಲಾಗಿ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ ಎಂದರು. ಇದಕ್ಕೆ ಕನ್ನಡಪರ ಹೋರಾಟಗಾರರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಹಲವು ಸಂಘಟನೆಗಳ ಮುಖಂಡರು ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೈಜ ಸಾಧಕರನ್ನು ಗುರ್ತಿಸಿ ಅಭಿನಂದಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯೋತ್ಸವ ಕಾಟಾಚಾರದ ಕಾರ್ಯಕ್ರಮವಾಗದೆ ಅಪ್ಪಟ ಕನ್ನಡದ ಕಾರ್ಯಕ್ರಮ ವಾಗಬೇಕು. ಕನ್ನಡ ನಾಮಪಲಕ ತೆರವು ಗೊಳಿಸುವ ವಿಚಾರದಲ್ಲಿ ಅಧಿಕಾರಿಗಳು ಇಚ್ಚಾ ಶಕ್ತಿ ಪ್ರದರ್ಶಿಸಬೇಕು.ಮುಖ್ಯವಾಗಿ ಆಯ್ಕೆ ಸಮಿತಿಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಇಓ ಮಂಜುನಾಥ ಹರ್ತಿ, ಪೌರಾಯುಕ್ತ ಕಾರ್ತಿಕೇಶ್ವರ್, ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ,ಗಂಗರಾಜು ಶಿರವಾರ,ಪ್ರಮೀಳಮಹದೇವ, ಮುನಿಪಾಪಯ್ಯ,ಅಗ್ನಿ ವೆಂಕಟೇಶ್ ವೆಂಕಟೇಶ್, ಜೆ. ಶಿವಕುಮಾರ್, ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.



