ಚಂದ್ರವಳ್ಳಿ ನ್ಯೂಸ್, ಮಂಡ್ಯ:
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೂರಿದರೂ ಅದೆಷ್ಟೋ ಜನರು ಇನ್ನೂ ಸ್ವತಂತ್ರವಿಲ್ಲದಂತೆ ಬದುಕುತ್ತಿದ್ದಾರೆ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೆಆರ್ ಪೇಟೆ ಮತ್ತು ನಾಗಮಂಗಲ ತಾಲೂಕು ವ್ಯಾಪ್ತಿಯ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭ್ರಷ್ಟಾಚಾರ ಹಾಗೂ ಲೋಕಾಯುಕ್ತ ವ್ಯವಸ್ಥೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನ್ಯಾ. ವೀರಪ್ಪ, "ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ಆದರೆ ನಾವು ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮಗೆ ಹಾಕಿರುವ ಬೇಡಿಯನ್ನು ಬಿಚ್ಚಿದರೆ, ಇಡೀ ಕರ್ನಾಟಕವನ್ನು ಸ್ವಚ್ಛ ಮಾಡುತ್ತೇವೆ. ಎಲ್ಲಿಯಾದರೂ ಅಕ್ರಮ ನಡೆಯುತ್ತಿದ್ದರೆ ಅದನ್ನು ನೋಡಿ ನನ್ನ ರಕ್ತ ಕುದಿಯುತ್ತದೆ" ಎಂದು ಆಕ್ರೋಶ ಹೊರಹಾಕಿದರು.
ಅವರ ಈ ಖಡಕ್ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಒಂದೊಂದು ಇಲಾಖೆ ಭ್ರಷ್ಟಾಚಾರದಲ್ಲಿ ಪೈಪೋಟಿ:
ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಕೆಲವು ಅಧಿಕಾರಿಗಳೇ ನೇರವಾಗಿ ಸಾಥ್ ನೀಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತರು, "ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಿಲ್ಲ, ಒಂದು ವೇಳೆ ಆ ಅಧಿಕಾರ ಸಿಕ್ಕರೆ ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸುಲಭವಾಗುತ್ತದೆ. ಅಕ್ರಮಗಳು ನಡೆಯುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಇಂದು ಒಂದೊಂದು ಇಲಾಖೆಗಳು ಜಿದ್ದಿಗೆ ಬಿದ್ದಂತೆ ಭ್ರಷ್ಟಾಚಾರದಲ್ಲಿ ಪೈಪೋಟಿ ನಡೆಸುತ್ತಿವೆ" ಎಂದು ತೀವ್ರವಾಗಿ ಕಿಡಿಕಾರಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಬಡವರು, ರೈತರು ಹಾಗೂ ಸಾರ್ವಜನಿಕರಿಂದ ಹಣ ಕಿತ್ತು ಬದುಕಲು ನಿಂತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜನರಿಗೆ ಕಾನೂನಿನ ಅರಿವಿನ ಕೊರತೆಯಿರುವುದರಿಂದ ತಾವೇ ಖುದ್ದಾಗಿ ತಾಲೂಕು ಮಟ್ಟಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಅಧಿಕಾರಿಗಳಿಗೆ ಕಾನೂನಿನ ಸಂಪೂರ್ಣ ಅರಿವಿದ್ದರೂ ತಿಳಿಯದವರಂತೆ ನಟಿಸುತ್ತಿದ್ದು, ಲೋಕಾಯುಕ್ತ ಸಂಸ್ಥೆಯು ಇಂತಹ ಅಧಿಕಾರಿಗಳಿಗೆ ಚಾಟಿ ಬೀಸಿ ಸರಿಯಾದ ದಾರಿಗೆ ತರುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಲೋಕಾಯುಕ್ತ ಸಂಸ್ಥೆಯಿಂದ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಅಭಯ ನೀಡಿದರು.
ವಿದ್ಯಾ ವಿಕಾಸ ಯೋಜನೆಯ ಕಳಪೆ ಶೂ ವಿತರಣೆಗೆ ತನಿಖಾ ಆದೇಶ:
ಇದೇ ವೇಳೆ ರಾಜ್ಯ ಸರ್ಕಾರದ 'ವಿದ್ಯಾ ವಿಕಾಸ ಯೋಜನೆ'ಯಡಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಶೂಗಳ ಗುಣಮಟ್ಟದ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ.
ರಾಜ್ಯದ 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ಅಂದಾಜು 72 ಕೋಟಿ ರೂಪಾಯಿ ಟೆಂಡರ್ ಘೋಷಿಸಲಾಗಿದ್ದು, ಈ ಟೆಂಡರ್ ಪಡೆದವರು ಅತ್ಯಂತ ಕಳಪೆ ಮಟ್ಟದ ಶೂಗಳನ್ನು ವಿತರಿಸಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಉಪಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ ಅವರು ಅಧಿಕೃತವಾಗಿ ಆದೇಶಿಸಿದ್ದಾರೆ.




