Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ- ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಹಾಗೂ ವ್ಯವಸ್ಥಿತ ಆಡಳಿತ ವೈಖರಿಯನ್ನು ಇಂದಿನ ರಾಜಕಾರಣಿಗಳು
, ಆಡಳಿತಗಾರರು ಮತ್ತು ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಸಮಾರಂಭದಲ್ಲಿ ನಾಡಪ್ರಭು ಕೆಂಪೇಗೌಡದ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು. ಪ್ರತಿಯೊಂದು ವ್ಯಾಪಾರ-ವಹಿವಾಟಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಅಂದಿನ ಕಾಲದ ಅತ್ಯಂತ ವೈಭವೋಪೇತ ಹಾಗೂ ಮಾದರಿ ನಗರಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಹಂಪಿಯಿಂದ ಪ್ರೇರಿತರಾಗಿದ್ದ ಕೆಂಪೇಗೌಡರು, ಹಂಪಿಯ ಮಾದರಿಯಲ್ಲೇ ಬೆಂಗಳೂರನ್ನು ಸುಂದರ ನಗರಿಯನ್ನಾಗಿ ಕಟ್ಟಲು ಸಂಕಲ್ಪ ಮಾಡಿ ಯಶಸ್ವಿಯಾದರು. ಕೇವಲ ವ್ಯಾಪಾರವಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿ, ನಗರದ ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದ್ದರು ಎಂದು ತಿಳಿಸಿದರು.

ಅನ್ನಕ್ಕಿಂತ ಅಕ್ಷರ ಮುಖ್ಯ ಎಂಬುದನ್ನು ದೃಢವಾಗಿ ನಂಬಿದ್ದ ಕೆಂಪೇಗೌಡರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮುಂದಿನ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವುದು ಅವರ ಮುಖ್ಯ ಗುರಿಯಾಗಿತ್ತು. ಅವರ ಈ ಉನ್ನತ ದೂರದೃಷ್ಠಿಯ ಚಿಂತನೆಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.

   ಒಕ್ಕಲಿಗರ ಅಭಿವೃದ್ಧಿ ನಿಗಮದ ವತಿಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸುಮಾರು 18ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅದೇ ರೀತಿ, ಸ್ವಾವಲಂಬಿ ಸಾರಥಿ ಯೋಜನೆಯಡಿ 6 ಜನಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಾರುಗಳನ್ನು ವಿತರಿಸುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 19 ಫಲಾನುಭವಿಗಳಿಗೆ ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಇಂದಿನ ಸುಸಜ್ಜಿತ ಹಾಗೂ ಬೃಹತ್ ಬೆಂಗಳೂರು ನಗರಕ್ಕೆ ನೂರಾರು ವರ್ಷಗಳ ಹಿಂದೆಯೇ ಶಾಶ್ವತ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಆಡಳಿತ ವೈಖರಿ ಇಂದಿನ ಆಡಳಿತಗಾರರಿಗೆ ದೊಡ್ಡ ಮಾದರಿಯಾಗಿದೆ ಎಂದರು.

ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲದೆ, ಸಮರ್ಥ ಆಡಳಿತಗಾರ ಹಾಗೂ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಮೂಲತಃ ಕೃಷಿಕರಾಗಿದ್ದ ಅವರು ಕೃಷಿ ಚಟುವಟಿಕೆಗಳ ಜೊತೆಗೆ ವ್ಯಾಪಾರೀಕರಣಕ್ಕೂ ಒತ್ತು ನೀಡಿದರು. ನಗರದಲ್ಲಿ ವಿವಿಧ ವೃತ್ತಿಗಳಿಗೆ ಅನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ್ದು, ಕೆರೆ-ಕಟ್ಟೆಗಳನ್ನು ಕಟ್ಟಿಸಿದ್ದು ಅವರ ಆಡಳಿತಾತ್ಮಕ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇದು ಇಂದಿನ ಆಡಳಿತಗಾರರಿಗೆ ಒಂದು ಪಾಠವಾಗಿದೆ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಸರ ಸಂರಕ್ಷಣೆಗಾಗಿ 15 ಲಕ್ಷ ಗಿಡ ನೆಡುವ ಬೃಹತ್ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಕೆಂಪೇಗೌಡರು ನಿರ್ಮಿಸಿದ ಉದ್ಯಾನನಗರಿ'ಯ ಹಸಿರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಎಸ್.ಸೌಮ್ಯ ಉಪನ್ಯಾಸ ನೀಡಿ, ಜಾಗತಿಕ ಮಟ್ಟದ ಅತ್ಯುನ್ನತ ವ್ಯಾಪಾರ ಕೇಂದ್ರ ಹಾಗೂ ತಾಂತ್ರಿಕ ಕೌಶಲ್ಯದ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿರುವ ಇಂದಿನ ಬೆಂಗಳೂರಿನ ಯಶಸ್ಸಿನ ಹಿಂದೆ ಆಡಳಿತಗಾರ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಜನಪರ ಕಾಳಜಿ ಅಡಗಿದೆ ಎಂದು ತಿಳಿಸಿದರು.

ವಿಶ್ವ ಮಟ್ಟದಲ್ಲಿ ವಿದ್ಯಾರ್ಥಿ ಸ್ನೇಹಿ ನಗರವಾಗಿ ಹೊರಹೊಮ್ಮಿರುವ ಬೆಂಗಳೂರು ಇಂದು ಜಾಗತಿಕ ಮಟ್ಟದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ 81ನೇ ಸ್ಥಾನ ಪಡೆದಿದೆ. ಇಂತಹ ಮಹಾನಗರಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರು ಕೇವಲ ಒಬ್ಬ ವೀರ ಯೋಧನಾಗಿರಲಿಲ್ಲ; ಬದಲಾಗಿ ಅತ್ಯುತ್ತಮ ಆರ್ಥಿಕ ಚಿಂತಕರು, ರಾಜಕೀಯ ಮುತ್ಸದ್ದಿ ಹಾಗೂ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. 16ನೇ ಶತಮಾನದಲ್ಲಿಯೇ ಅವರು ಮಾದರಿಯಾದ ಯೋಜನಾಬದ್ಧ ನಗರವನ್ನು ನಿರ್ಮಿಸಲು ಕನಸು ಕಂಡಿದ್ದರು. ಕೃಷಿ, ನೀರಾವರಿ ಸಂಪನ್ಮೂಲ, ಭದ್ರತೆ, ಆಡಳಿತ ಹಾಗೂ ಸುಭಿಕ್ಷವಾದ ವಾಣಿಜ್ಯ ವ್ಯವಸ್ಥೆಯನ್ನು ಒಟ್ಟಿಗೆ ಸಮ್ಮಿಲನಗೊಳಿಸಿ ಈ ನಗರವನ್ನು ಕಟ್ಟುವುದು ಅವರ ಆಶಯವಾಗಿತ್ತು. ಅವರ ಅಂದಿನ ಪರಿಶ್ರಮ, ಬದ್ಧತೆ ಹಾಗೂ ನೈತಿಕತೆಯ ವ್ಯಕ್ತಿತ್ವ ಇಂದಿನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮಾದರಿಯಾಗಬೇಕಿದೆ ಎಂದು ಡಾ. ಸೌಮ್ಯ ಆಶಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಂಗವಾಗಿ ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ, ಕವನ ವಾಚನ, ಚಿತ್ರಕಲೆ ಹಾಗೂ ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಸುನೀತಾ ನರ್ಸಿಂಗ್ ಹೋಂನ ಡೈ.ಸೌಮ್ಯ ಸಂದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ್, ಮುಖಂಡರಾದ ಲಕ್ಷ್ಮೀಕಾಂತ್, ಕಂದಿಕೆರೆ ಸುರೇಶ್ ಬಾಬು, ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸೇರಿದಂತೆ ಮತ್ತಿತರರು ಇದ್ದರು. ಹೊಸದುರ್ಗದ ಶಬೀನಾ ಬಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಿರೂಪಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾವಣ್ಯ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಜಿಕೆವಿಕೆಯಲ್ಲಿ ವೈವಿಧ್ಯಮಯ ‘ರೈತ ಸಂತೆ’: ಗೋಧಿ ಪಾಯಸ, ಬಟರ್ ಫ್ರೂಟ್ ಹಾಗೂ ಅವರೆಕಾಳು ಸಿಪ್ಪೆ ತೆಗೆಯುವ ಯಂತ್ರಕ್ಕೆ ಭಾರಿ ಬೇಡಿಕೆಜುಲೈ 10 ರಿಂದ 12ರವರೆಗೆ ಬೆಂಗಳೂರಿನ ಜಿಕೆವಿಕೆಯಲ್ಲಿ “ಸಸ್ಯ ಸಂತೆ” ಆಯೋಜನೆ, ಮಳಿಗೆ ಕಾಯ್ದಿರಿಸಲು ಅವಕಾಶಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‘ಕಲ್ಲಿನ ಕೋಟೆ ಕಾವ್ಯೋತ್ಸವ’ ವೈಭವ: ಆರು ಪ್ರಮುಖ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ ಯಶಸ್ವಿ!ಜೂನ್ 29ರಂದು ಜಿ.ಎಸ್.ಉಜ್ಜನಪ್ಪ ಅವರ ನೆನಪಿನಲ್ಲಿ “ಸ್ವಾತಂತ್ರ್ಯದ ಓಟ” ನಾಟಕ ಪ್ರದರ್ಶನಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ- ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ50 ವರ್ಷಗಳ ಬಳಿಕ ಒಂದಾದ ಬಾಲ್ಯದ ಗೆಳೆಯರು: ಕಣ್ಣಾಲಿಗಳು ತುಂಬಿ ಬಂದ ಚಿನ್ಮುಲ್ಲಾದ್ರಿ ಶಾಲೆಯ ‘ಸುವರ್ಣ ಸಂಭ್ರಮ’!ಸಿಎಂಗೆ ಸೋಮಣ್ಣ ಕಿವಿಮಾತು, ವಿಜಯೇಂದ್ರಗೆ ನಿರಾಣಿ ಸಲಹೆ: ದಾವಣಗೆರೆಯಲ್ಲಿ ಬಿಜೆಪಿ ನಾಯಕರ ಭರ್ಜರಿ ಬ್ಯಾಟಿಂಗ್!ಬೆಂಗಳೂರಿಗೆ ಸಿಕ್ತು ಹೊಸ ಮೆಗಾ ಕನೆಕ್ಟಿವಿಟಿ: ಎಸ್.ಎಂ. ಕೃಷ್ಣ ಹೆಸರಿನ ಭವ್ಯ 'ದಶಪಥ ರಸ್ತೆ' ಲೋಕಾರ್ಪಣೆ!