ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿದ್ದ ದಕ್ಷ, ಪ್ರಾಮಾಣಿಕ ಹಾಗೂ ಅತ್ಯಂತ ಸ್ವಾಭಿಮಾನಿ ನಾಯಕ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಸ್ಮರಣೀಯ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.
ನಗರಸಭೆಯ ಮುಂಭಾಗ ಒಕ್ಕಲಿಗ ಯುವ ವೇದಿಕೆಯ ಸ್ನೇಹಿತರ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಬಸವಪುರದ ಶಿವಾನಂದ ಆಶ್ರಮದ ಶ್ರೀ ಶ್ರೀ ಶ್ರೀ ರಮಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಈ ಸತ್ಕಾರ್ಯ ನೆರವೇರಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಅವರು ತಿಳಿಸಿದರು.
ವಿಧಾನಸೌಧ ಕನ್ನಡಿಗರ ಹೆಮ್ಮೆ: ಕೆಂಗಲ್ ಹನುಮಂತಯ್ಯ ಅವರ ದೃಢಸಂಕಲ್ಪದ ಫಲವಾಗಿ ನಿರ್ಮಾಣವಾದ ಭವ್ಯವಾದ ವಿಧಾನಸೌಧವು ವಿಶ್ವದ ಅತ್ಯಂತ ಅದ್ಭುತ ವಾಸ್ತುಶಿಲ್ಪಗಳಲ್ಲಿ ಒಂದಾಗಿ ನಿಂತಿದ್ದು, ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಸ್ಮರಿಸಿದರು.




