ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಧುನಿಕ ತಂತ್ರಜ್ಞಾನ ಹಾಗೂ ಡೇಟಿಂಗ್ ಆ್ಯಪ್‌ಗಳನ್ನು ದುರುಪಯೋಗಪಡಿಸಿಕೊಂಡು ಯುವಕರನ್ನು ಹನಿಟ್ರ್ಯಾಪ್ ಮಾದರಿಯಲ್ಲಿ ಸಿಲುಕಿಸಿ, ಅಪಹರಿಸಿ ದರೋಡೆ ಮಾಡುತ್ತಿದ್ದ ಮೂವರು ಅಂತರ್ಜಿಲ್ಲಾ ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಸಾರಾಯಿಪಾಳ್ಯ ನಿವಾಸಿ, ಫ್ಲವರ್ ಡೆಕೋರೇಷನ್ ಕೆಲಸ ಮಾಡುವ ಸಯ್ಯದ್ ಮಜರ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ವಸೀಂ, ತನ್ನು ಹಾಗೂ ತಬ್ರೇಜ್ ಎಂಬಾತನನ್ನು ಬಂಧಿಸಿದ್ದಾರೆ. ಜೂನ್ 16ರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡೇಟಿಂಗ್ ಆ್ಯಪ್‌ನಿಂದ ಶುರುವಾದ ಜಾಲ:
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಸಯ್ಯದ್ ಇತ್ತೀಚೆಗೆ ಡೇಟಿಂಗ್ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಈ ಆ್ಯಪ್ ಮೂಲಕ ಆರೋಪಿ ವಸೀಂ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು, ವಾಟ್ಸಾಪ್‌ನಲ್ಲಿ ಚಾಟಿಂಗ್ ಮುಂದುವರಿಸಿದ್ದರು.
ಲೋಕೇಷನ್ ನೀಡಿ ಕರೆಸಿಕೊಂಡರು: ಜೂನ್ 16ರ ಸಂಜೆ ಭೇಟಿಯಾಗುವ ನೆಪದಲ್ಲಿ ವಸೀಂ ತಾನು ಇದ್ದ ಜಾಗದ ಲೋಕೇಷನ್ ಅನ್ನು ಸಯ್ಯದ್‌ಗೆ ಕಳುಹಿಸಿದ್ದ. ಅದರಂತೆ ಸಯ್ಯದ್ ತನ್ನ ಬೈಕ್‌ನಲ್ಲಿ ಅಶ್ವಥ್ ನಗರದ ಬಳಿ ಬಂದಿದ್ದಾನೆ.
ಚಾಕು ತೋರಿಸಿ ದರೋಡೆ: ಅಲ್ಲಿಗೆ ಕಾರಿನಲ್ಲಿ ಬಂದ ವಸೀಂ, ಸಯ್ಯದ್‌ನನ್ನು ಕಾರಿನೊಳಗೆ ಕೂರಿಸಿಕೊಂಡಿದ್ದಾನೆ. ಇನ್ನು ಕೊಂಚ ದೂರ ಹೋಗುತ್ತಿದ್ದಂತೆ ಕಾರಿನಲ್ಲಿದ್ದ ಇನ್ನುಳಿದ ಇಬ್ಬರು ಆರೋಪಿಗಳು ಸಯ್ಯದ್‌ಗೆ ಚಾಕು ತೋರಿಸಿ ಹೆದರಿಸಿ, ಮೊಬೈಲ್ ಕಸಿದುಕೊಂಡಿದ್ದಾರೆ.
ಹಣ ವರ್ಗಾವಣೆ ಮತ್ತು ಬೆದರಿಕೆ: ಸಯ್ಯದ್ ಬಳಿಯಿದ್ದ 5 ಸಾವಿರ ನಗದು ಹಾಗೂ ಆತನ ಬ್ಯಾಂಕ್ ಖಾತೆಯಲ್ಲಿದ್ದ 6 ಸಾವಿರ ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ದರೋಡೆಕೋರರು, ಇನ್ನೂ 5 ಲಕ್ಷ ನೀಡದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದು ತೀವ್ರವಾಗಿ ಬೆದರಿಸಿದ್ದಾರೆ.
"ಸಮುದಾಯದ" ಹೆಸರಲ್ಲಿ ಬ್ಲ್ಯಾಕ್‌ಮೇಲ್ ತಂತ್ರ!:
ಅಪಹರಣಕಾರರು ಸಂತ್ರಸ್ತನನ್ನು ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
"ನೀನು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಡೇಟಿಂಗ್ ಆ್ಯಪ್ ಬಳಸುವುದು ಎಷ್ಟು ಸರಿ? ಎಂದು ಆರೋಪಿಗಳು ಧಮಕಿ ಹಾಕಿದ್ದಾರೆ. ಅಲ್ಲದೆ, ಈ ವಿಷಯವನ್ನು ನಿನ್ನ ಮನೆಯವರಿಗೆ ತಿಳಿಸುತ್ತೇವೆ, ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಾನ ಹರಾಜು ಹಾಕುತ್ತೇವೆ ಎಂದು ಹೆದರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು."
ಜಿ.ಕೆ.ಮಿಥುನ್ ಕುಮಾರ್, ಡಿಸಿಪಿ (ಈಶಾನ್ಯ ವಿಭಾಗ).
ಜೀವಭಯದಲ್ಲಿ ಕಿಡ್ನ್ಯಾಪರ್‌ಗಳಿಂದ ತಪ್ಪಿಸಿಕೊಂಡ ಯುವಕ:
ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಆರೋಪಿಗಳು ರಜಾಕ್ ಪಾಳ್ಯದ ಬಳಿ ಕಾರು ನಿಲ್ಲಿಸಿದಾಗ, ಸಂತ್ರಸ್ತ ಸಯ್ಯದ್ ಜೀವಭಯದಿಂದ ಕಾರಿನಿಂದ ಹೊರಗೆ ನೆಗೆದು ಜೋರಾಗಿ ಕೂಗಾಡುತ್ತಾ ತಪ್ಪಿಸಿಕೊಂಡಿದ್ದಾನೆ.
ಟ್ವಿಸ್ಟ್ ಕೊಟ್ಟ ಸಾರ್ವಜನಿಕರ ಧರ್ಮದೇಟು:
ಯುವಕನ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಅಪಹರಣಕಾರರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ ವಸೀಂಗೆ ಸ್ಥಳೀಯರು ಧರ್ಮದೇಟು ನೀಡಿದ್ದರಿಂದ ಆತನ ಕಾಲಿಗೆ ಬಲವಾದ ಪೆಟ್ಟಾಗಿದೆ. ಉಪಾಯ ಹೂಡಿದ ವಸೀಂ, ತನಗಾದ ಗಾಯದ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲು ಯತ್ನಿಸಿದ್ದಾನೆ. ಆದರೆ ಬಾಗಲೂರು ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ಅಪಹರಣ ಹಾಗೂ ದರೋಡೆಯ ಅಸಲಿ ಕಥೆ ಬಯಲಾಗಿದೆ.
ಪ್ರಸ್ತುತ ಕಾಲಿಗೆ ಪೆಟ್ಟಾಗಿರುವ ಆರೋಪಿ ವಸೀಂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಕಸ್ಟಡಿಗೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



