ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿರುವ ವಿವಿಧ ನೇಮಕಾತಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮಗಳಾಗಿವೆ ಎಂದು ಆರೋಪಿಸಿ ಗ್ರೇಟರ್ ಬೆಂಗಳೂರು ಜೆಡಿಎಸ್ ಘಟಕದ ನೇತೃತ್ವದಲ್ಲಿ ಇಂದು ಬೆಂಗಳೂರಿನ ಜಸ್ಮಾಭವನ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಹೆಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ತಕ್ಷಣವೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಉಗ್ರವಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖ ನಾಯಕರು:
ಅಖಂಡ ಶ್ರೀನಿವಾಸ್ ಮೂರ್ತಿ (ಮಾಜಿ ಶಾಸಕರು), ಆರ್. ಪ್ರಕಾಶ್, ಟಿ. ತಿಮ್ಮೇಗೌಡ, ಹೆಚ್.ಸಿ. ಕೃಷ್ಣ (ಜಿಬಿಎ ಜಿಲ್ಲಾವಾರು ಅಧ್ಯಕ್ಷರು), ಶ್ರೀಮತಿ ಶೈಲಾ ಸಂತೋಜಿ ರಾವ್ (ಗ್ರೇಟರ್ ಬೆಂಗಳೂರು ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷರು), ಆರ್. ಸ್ಯಾಮುಯಲ್ (ಯುವ ಘಟಕದ ಅಧ್ಯಕ್ಷರು), ಟಿ.ಆರ್. ತುಳಸಿ ರಾಮ್ (ಗ್ರೇಟರ್ ಬೆಂಗಳೂರು ಕಾರ್ಯಾಧ್ಯಕ್ಷರು, ಎಸ್. ರಮೇಶ್ (ಮಹಾಪ್ರಧಾನ ಕಾರ್ಯದರ್ಶಿ).
ಈ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ವಿಭಾಗೀಯ ನಾಯಕರು, ಮಹಿಳಾ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಯುವಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಭ್ರಷ್ಟ ಸರ್ಕಾರದ ನಡೆ ಖಂಡಿಸಿ ಗಟ್ಟಿಯಾಗಿ ಧ್ವನಿ ಎತ್ತಿದ ನಾಯಕರು, ಕರಪತ್ರ ಹಾಗೂ ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.




