ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ತೀವ್ರಗೊಂಡಿದ್ದು, ಒಂದೊಂದೇ ರೋಚಕ ಹಾಗೂ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪದಚ್ಯುತ ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ.ಗೀತಾ ಅವರು ತನಿಖೆ ವೇಳೆ ಅಕ್ರಮದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಪರೀಕ್ಷೆಗೂ ಹಿಂದಿನ ದಿನವೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಮೂಲಕ 80 ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಂಡು ಬೃಹತ್ ಪ್ರಮಾಣದಲ್ಲಿ ಹಣ ವಸೂಲಿ ಮಾಡಿರುವುದು ಇ.ಡಿ ನಡೆಸಿದ ತನಿಖೆಯಿಂದ ಅಧಿಕೃತವಾಗಿ ಬೆಳಕಿಗೆ ಬಂದಿದೆ.
ಅಕ್ರಮದ ವಿವರಗಳು ಮತ್ತು ಇ.ಡಿ ಪ್ರಕಟಣೆಯ ಮುಖ್ಯಾಂಶಗಳು: ಐಎಎಸ್ ಅಧಿಕಾರಿಯ ಕೈವಾಡ: ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿ ಕಠಿಣ ವಿಚಾರಣೆ ನಡೆಸಿದಾಗ, ಶಿವಶಂಕರಪ್ಪ ಸಾಹುಕಾರ್ ಹಾಗೂ ಬಿ.ವಿ.ಗೀತಾ ಈ ಅಕ್ರಮದಲ್ಲಿ ನೇರವಾಗಿ ಶಾಮೀಲಾಗಿರುವುದು ಖಚಿತಪಟ್ಟಿದೆ.
ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಲೀಕ್: ಒಟ್ಟು 400 ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಜನವರಿ 8ರಂದು ಕೆಪಿಎಸ್‍ಸಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಕೇವಲ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 7ರಂದೇ ಜ್ಞಾನೇಂದ್ರ ಕುಮಾರ್ ಅವರು ಶಿವಶಂಕರಪ್ಪ ಮತ್ತು ಗೀತಾ ಅವರಿಗೆ ಪ್ರಶ್ನೆಪತ್ರಿಕೆಯ ವಿವರಗಳನ್ನು ರವಾನಿಸಿದ್ದರು.
ವಿಲ್ಲಾದಲ್ಲಿ ವಿಶೇಷ ತರಬೇತಿ: ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರವಲ್ಲದೆ, ಬೆಂಗಳೂರು ನಗರ ಹೊರವಲಯದ ವಿಲ್ಲಾವೊಂದಕ್ಕೆ 10ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ರಹಸ್ಯವಾಗಿ ಕರೆದೊಯ್ಯಲಾಗಿತ್ತು. ಅಲ್ಲಿ 80 ಪ್ರಶ್ನೆಗಳಿಗೆ ನಿಖರ ಉತ್ತರಗಳನ್ನು ನೀಡಿ, ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣರಾಗಲು ಕಂಠಪಾಠ ಮಾಡುವಂತೆ ವಿಶೇಷ ತರಬೇತಿ ಕೊಡಿಸಲಾಗಿತ್ತು.
ಲಂಚದ ದೊಡ್ಡ ಜಾಲ: ಸದಸ್ಯೆ ಬಿ.ವಿ ಗೀತಾ ಅವರು ಅಭ್ಯರ್ಥಿಯೊಬ್ಬರೊಂದಿಗೆ 40 ಲಕ್ಷ ರೂ.ಗೆ ಡೀಲ್ ಕುದುರಿಸಿ 20 ಲಕ್ಷ ಮುಂಗಡ ಪಡೆದರೆ, ಶಿವಶಂಕರಪ್ಪ ಅವರು ಮತ್ತೊಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ.ಗೆ ಮಾತುಕತೆ ನಡೆಸಿ 10 ಲಕ್ಷ ಮುಂಗಡ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆಯಾಗಿ ಒಬ್ಬ ಅಭ್ಯರ್ಥಿಯಿಂದ 10 ಲಕ್ಷದಿಂದ 50 ಲಕ್ಷ ರೂ.ವರೆಗೆ ಲಂಚ ಪಡೆಯಲಾಗಿದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಹೈ-ಸ್ಕೋರ್ ಪಡೆದ ಕನಿಷ್ಠ 6 ಅಭ್ಯರ್ಥಿಗಳು ಈ ವಾಮಮಾರ್ಗ ಅನುಸರಿಸಿರುವುದು ದೃಢಪಟ್ಟಿದೆ.
ಅರ್ಹತಾ ಪಟ್ಟಿಯ ದುರುಪಯೋಗ: ಗೌಪ್ಯವಾಗಿಡಬೇಕಾಗಿದ್ದ 1:3 ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ವೈಯಕ್ತಿಕ ಅಂಕಗಳನ್ನು ಬಹಿರಂಗಪಡಿಸದೆ, ಕೆಪಿಎಸ್‍ಸಿ ಸದಸ್ಯರೇ ನೇರವಾಗಿ ಅವರನ್ನು ಸಂಪರ್ಕಿಸಿ ಹಣ ನೀಡಿದರೆ ಅಂತಿಮ ನೇಮಕಾತಿ ಖಚಿತಪಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ.
ದಾಳಿ ವೇಳೆ ಸಿಕ್ಕ ದಾಖಲಾತಿಗಳು: ಈ ಹಿಂದೆ ಇ.ಡಿ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ ಬರೋಬ್ಬರಿ 80 ಲಕ್ಷ ರೂ. ಮೌಲ್ಯದ ಸಹಿ ಮಾಡಲಾದ ಖಾಲಿ ಚೆಕ್‌ಗಳು ಹಾಗೂ ಪ್ರಾಮಿಸರಿ ನೋಟ್‌ಗಳು ಪತ್ತೆಯಾಗಿದ್ದವು.
ಸದ್ಯ ಆರೋಪಿಗಳಿಬ್ಬರನ್ನು 14 ದಿನಗಳ ಇ.ಡಿ ವಶಕ್ಕೆ ಪಡೆಯಲಾಗಿದ್ದು, ಈ ಅಕ್ರಮ ನೇಮಕಾತಿ ಜಾಲದಲ್ಲಿ ಭಾಗಿಯಾಗಿರುವ ಇನ್ನುಳಿದ ಪ್ರಭಾವಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.




