ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ(KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ನಡೆಸಿರುವ ತನಿಖೆಯಿಂದ ಹಲವು ಆಘಾತಕಾರಿ ಹಾಗೂ ಸ್ಫೋಟಕ ವಿಚಾರಗಳು ಹೊರಬಂದಿವೆ.
ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಮತ್ತು KPSCಯ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಈ ಅಕ್ರಮ ಜಾಲ ಕಾರ್ಯಾಚರಣೆ ನಡೆಸಿರುವುದು ತನಿಖೆಯಿಂದ ದೃಢಪಟ್ಟಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಡಂಬಡಿಕೆ: ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದ ಬಸವರಾಜ್ ಕನ್ನಾಳೆ, ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಒದಗಿಸಿದ್ದ. ಇದಕ್ಕೆ KPSCಯ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಅವರು ಪ್ರಮುಖ ನೆರವು ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಹಣದ ಬೇಡಿಕೆ ಮತ್ತು ವ್ಯವಹಾರ: ಆರಂಭದಲ್ಲಿ ಅಭ್ಯರ್ಥಿಗಳಿಂದ ಒಟ್ಟು 80 ಲಕ್ಷ ರೂಪಾಯಿವರೆಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ತಲಾ 30 ರಿಂದ 40 ಲಕ್ಷ ರೂಪಾಯಿಗೆ ಹಣವನ್ನು ಅಂತಿಮಗೊಳಿಸಲಾಗಿತ್ತು. ಮುಂಗಡವಾಗಿ ನಗದು ಹಾಗೂ ಬ್ಯಾಂಕ್ ಮೂಲಕ ಹಣ ಪಡೆದಿದ್ದ ಆರೋಪಿ, ಉಳಿದ ಮೊತ್ತಕ್ಕೆ ಚೆಕ್‌ಗಳನ್ನು ಪಡೆದಿದ್ದು, ಇಡಿ ಅಧಿಕಾರಿಗಳು ಕೆಲವು ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ರೆಸಾರ್ಟ್‌ಕಂಠಪಾಠ ವ್ಯವಸ್ಥೆ: ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆ ಜತೆಗೆ ಸರಿಯಾದ ಉತ್ತರಗಳನ್ನು ನೀಡಲಾಗಿತ್ತಲ್ಲದೆ, ಬಸವರಾಜ್ ಕನ್ನಾಳೆ ಹಾಗೂ ಆತನ ಸಹಚರರು ಅಭ್ಯರ್ಥಿಗಳಿಗೆ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದರು.
ಸುರಕ್ಷಿತ ಸಾರಿಗೆ ಮತ್ತು ಸಂಚು: ಪರೀಕ್ಷೆಯ ದಿನದಂದು ಯಾವುದೇ ಅನುಮಾನ ಬಾರದಂತೆ, ಬಸವರಾಜ್ ಕನ್ನಾಳೆ ಮತ್ತು ಆತನ ಸಹಚರರೇ ಸ್ವತಃ ವಾಹನಗಳ ವ್ಯವಸ್ಥೆ ಮಾಡಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ್ದರು.
ಹಣ ಮರೆಮಾಚುವ ಯತ್ನ: ಅಕ್ರಮವಾಗಿ ಸಂಪಾದಿಸಿದ ಹಣವನ್ನು ಬ್ಯಾಂಕ್ ವರ್ಗಾವಣೆ, ಚಿನ್ನ ಖರೀದಿ, ವಿಮಾನ ಪ್ರಯಾಣ ಮತ್ತು ನಗದು ವಹಿವಾಟುಗಳ ಮೂಲಕ ಬಿಳಿ ಮಾಡಿಕೊಳ್ಳಲು (ಮರೆಮಾಚಲು) ಆರೋಪಿಗಳು ಯತ್ನಿಸಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಸ್ತುತ ಈ ಅಕ್ರಮ ಹಣದ ವಹಿವಾಟಿನ ಕುರಿತು ಇಡಿಯಿಂದ ತನಿಖೆ ತೀವ್ರಗೊಂಡಿದ್ದು, ಶಂಕಿತ ಬ್ಯಾಂಕ್ ಖಾತೆಗಳ ಪರಿಶೀಲನೆ ಮುಂದುವರಿದಿದೆ. ಜತೆಗೆ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಯನ್ನು ತನಿಖೆಗೆ ಒಳಪಡಿಸಲಾಗಿದೆ.




