ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾನು ಪ್ರಭಾವಿ ಸಂಘಟನೆಯೊಂದರ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಹಫ್ತಾಗೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿಯ ದೂರಿನ ಮೇರೆಗೆ ಮಹಿಳೆ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಚೇರಿಗೆ ನುಗ್ಗಿ ರಂಪಾಟ, ಹಫ್ತಾ ವಸೂಲಿ ಯತ್ನ!-
ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಎಂಬುವವರು ಕಚೇರಿ ಹೊಂದಿದ್ದಾರೆ. ಇತ್ತೀಚೆಗೆ ಇವರ ಕಚೇರಿಗೆ ನುಗ್ಗಿದ ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ತೀವ್ರ ಗಲಾಟೆ ಎಬ್ಬಿಸಿದ್ದಾರೆ.
ತಾನು ಸಂಘಟನೆಯೊಂದರ ಯುವಸೇನೆಯ ಮುಖ್ಯಸ್ಥೆ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡ ಸಂಗೀತ ರಾಮ್, ಉದ್ಯಮಿಗೆ ನೇರವಾಗಿಯೇ ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.
ವಿವಾದವೇನು? ₹10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದೇಕೆ?-
ಉದ್ಯಮಿ ವೆಂಕಟರಾಜು ಅವರು ಶಿವಾಜಿನಗರದಲ್ಲಿರುವ ಸೈಟ್‌ಒಂದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ 'ರಿಜಿಸ್ಟರ್ಡ್ ಅಗ್ರಿಮೆಂಟ್' ಮಾಡಿಸಿಕೊಂಡಿದ್ದರು. ಇದೇ ಜಾಗದ ವಿಚಾರವನ್ನು ಮುಂದಿಟ್ಟುಕೊಂಡು ಕಚೇರಿಯಲ್ಲಿ ರೌಡಿಸಂ ಮಾಡಿರುವ ಮಹಿಳೆ ಸಂಗೀತ ರಾಮ್, ಉದ್ಯಮಿಗೆ ಹಫ್ತಾ ನೀಡುವಂತೆ ಒತ್ತಾಯಿಸಿದ್ದಾಳೆ.
"ನೀನು ಕಾನೂನುಬದ್ಧವಾಗಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದರೂ ಆ ಜಾಗದ ಕಡೆ ಇನ್ಮುಂದೆ ತಲೆಹಾಕಬಾರದು. ನಾವು ನಿನ್ನ ತಂಟೆಗೆ ಬರಬಾರದು ಎಂದರೆ ತಕ್ಷಣ ನನಗೆ 10 ಲಕ್ಷ ರೂಪಾಯಿ ನೀಡಬೇಕು" ಎಂದು ಆಕೆ ಡಿಮ್ಯಾಂಡ್ ಮಾಡಿದ್ದಾಳೆ ಎನ್ನಲಾಗಿದೆ.
'ದೂರು ನೀಡಿದರೆ ಕೊಲೆ ಮಾಡಿಸುತ್ತೇನೆ' ಎಂದು ದರ್ಪ!
ಹಣ ನೀಡಲು ನಿರಾಕರಿಸಿದ ಉದ್ಯಮಿಗೆ ಮಹಿಳೆ ಹಾಗೂ ಆಕೆಯ ಕಡೆಯವರು ಭೀಕರ ಜೀವ ಬೆದರಿಕೆ ಹಾಕಿದ್ದಾರೆ. "ಒಂದು ವೇಳೆ ಈ ವಿಷಯವಾಗಿ ಪೊಲೀಸರ ಬಳಿ ಹೋದರೆ, ನಿನ್ನ ಕಚೇರಿಗೆ ನುಗ್ಗಿ ಹೊಡೆಯುತ್ತೇವೆ. ಅಷ್ಟೇ ಅಲ್ಲದೆ 15 ರಿಂದ 20 ಜನರನ್ನು ಕರೆಸಿ ನಿನ್ನನ್ನು ಕೊಲೆ ಮಾಡಿಸುತ್ತೇವೆ" ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ.
ಪೊಲೀಸ್ ಕಂಪ್ಲೇಂಟ್, ತನಿಖೆ ಆರಂಭ-
ಮಹಿಳೆಯ ದರ್ಪ ಮತ್ತು ಕೊಲೆ ಬೆದರಿಕೆಯಿಂದ ಬೇಸತ್ತ ಉದ್ಯಮಿ ವೆಂಕಟರಾಜು ಅವರು ತಕ್ಷಣವೇ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಸಂಗೀತ ರಾಮ್ ಹಾಗೂ ಆಕೆಯ ಸಹಚರರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಉದ್ಯಮಿಯ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.



