ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಾಂಧಿವಾದಿ, ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯರಾದ ದಿವಂಗತ ಎಚ್. ಹನುಮಂತಪ್ಪನವರ ಸ್ಮರಣಾರ್ಥವಾಗಿ 'ನುಡಿ ನಮನ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಚಲವಾದಿ ಗುರುಪೀಠ ಟ್ರಸ್ಟ್‌ನ ಖಜಾಂಚಿಗಳಾದ ಹೆಚ್.ಸಿ. ನಿರಂಜನಮೂರ್ತಿ ತಿಳಿಸಿದರು.
ಇಲ್ಲಿನ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬರುವ ಸೆ.27ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ತ.ರಾ.ಸು. ರಂಗಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು, ರಾಜಕೀಯ ಮುತ್ಸದ್ಧಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಹೆಚ್. ಹನಪುಮಂತಪ್ಪನವರ ಸ್ಮರಣಾರ್ಥ ಶ್ರೀ ಚಲವಾದಿ ಗುರುಪೀಠ ಟ್ರಸ್ಟ್ ಹಾಗೂ ವಿವಿಧ ಸಮುದಾಯಗಳ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಂದು ಗೌರವ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವು ಪ್ರಮುಖ ನಾಯಕರು, ವಿವಿಧ ಸಮುದಾಯಗಳ ಮುಖಂಡರು ಆಗಮಿಸಲಿದ್ದಾರೆ. ಚಿತ್ರದುರ್ಗ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ ಎಂದು ಹೇಳಿದರು.
ಸಾಧನೆಯ ಸ್ಮರಣೆ: ದಿವಂಗತ ಹೆಚ್. ಹನುಮಂತಪ್ಪನವರು ಚಿತ್ರದುರ್ಗ ಜಿಲ್ಲೆಗೆ ನೀಡಿದ ಅಪಾರ ಕೊಡುಗೆ, ಅವರ ಮುತ್ಸದ್ಧಿತನ ಹಾಗೂ ನಡೆದು ಬಂದ ದಾರಿಯನ್ನು ಇಂದಿನ ಪೀಳಿಗೆಗೆ ಸ್ಮರಿಸುವ ಮತ್ತು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖ ನಾಯಕರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಸಂಘಟಕ ನಿರಂಜನಮೂರ್ತಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಟ್ರಸ್ಟ್‌ನ ಅಧ್ಯಕ್ಷರಾದ ಲಕ್ಷ್ಮೀನರಸಿಂಹಯ್ಯ, ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಚಿತ್ರದುರ್ಗ ಜಿಲ್ಲೆಯ ಸಂಸದರಾದ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಅಲ್ಲದೆ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಚಿತ್ರದುರ್ಗ ಜಿಲ್ಲೆಯ ಐದು ಜನ ಶಾಸಕರು ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಹಾಗೂ ಶ್ರೀ ಶಾರದಾ ಬ್ರಾಸ್ ಬ್ಯಾಂಡ್‌ನ ಮಾಲೀಕರಾದ ಎಸ್.ಬಿ. ಮೂರ್ತಣ್ಣ, ಸಮಾಜದ ಮುಖಂಡರಾದ ಜಯರಾಮ್ ಹಾಗೂ ಬಿ.ಹೆಚ್. ನಟರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.




