ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಭೂಸ್ವಾಧೀನ ವಿರೋಧಿಸಿದರೆ ಲಾಠಿ ಏಟು ಗ್ಯಾರೆಂಟಿ! ಇದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರೆಂಟಿ" ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಅತ್ಯಂತ ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ರೈತರು ಹಾಗೂ ಮಹಿಳಾ ಹೋರಾಟಗಾರರ ಮೇಲೆ ಪೊಲೀಸರು ನಡೆಸಿರುವ ಲಾಠಿ ಪ್ರಹಾರವನ್ನು ಅವರು ತೀವ್ರವಾಗಿ ಖಂಡಿಸಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿದ್ದಾರೆ.
400 ದಿನಗಳ ಶಾಂತಿಯುತ ಹೋರಾಟಕ್ಕೆ ಹಿಂಸೆಯ ಉತ್ತರ:
ಸರ್ಜಾಪುರ ಹೋಬಳಿಯ 11 ಹಳ್ಳಿಗಳ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳಲು ಕಳೆದ 400 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಬುಧವಾರ ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ 600ಕ್ಕೂ ಹೆಚ್ಚು ರೈತರನ್ನು ಮಡಿವಾಳ ಚೆಕ್ ಪೋಸ್ಟ್ ಬಳಿ ತಡೆದು, ಪೊಲೀಸರು ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದಾರೆ. ಹೆಣ್ಣುಮಕ್ಕಳು ಮತ್ತು ವೃದ್ಧ ತಾಯಂದಿರನ್ನು ರಸ್ತೆಯಲ್ಲಿ ಎಳೆದಿದ್ದಾಡಿ ಹೊಡೆಯಲಾಗಿದೆ. ಈ ದೌರ್ಜನ್ಯದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 20ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿದ್ದ ದೇವರಾಜು ಎಂಬ ರೈತನಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದರೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸದ ಸರ್ಕಾರದ ಅಮಾನವೀಯ ಆಡಳಿತಕ್ಕೆ ಅವರು ಧಿಕ್ಕಾರ ಕೂಗಿದ್ದಾರೆ.
ನೇರ ಪ್ರಶ್ನೆ ಹಾಗೂ ಕಮಿಷನ್ ಆರೋಪ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿರುವ ಆರ್. ಅಶೋಕ್, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ನಿರ್ಮಾಣದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ರೈತರ ಫಲವತ್ತಾದ ಜಮೀನನ್ನು ಧಾರೆ ಎರೆಯಲು ಯಾರಿಂದ ಕಮಿಷನ್ ಪಡೆದಿದ್ದೀರಿ?
ಅನ್ನ ಕೊಡುವ ರೈತರ ಮೇಲೆ ಬೂಟುಗಾಲಿನಿಂದ ತುಳಿಯುವುದು, ಲಾಠಿಯಿಂದ ಬಡಿಯುವುದೇ ನೀವು ಕೊಡುವ ಆರನೇ ಗ್ಯಾರೆಂಟಿನಾ?
400 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡದಷ್ಟು ಸೊಕ್ಕಿನಿಂದ ಬೀಗುತ್ತಿದ್ದೀರಾ?
ಬಿಜೆಪಿಯಿಂದ ಉಗ್ರ ಹೋರಾಟದ ಎಚ್ಚರಿಕೆ:
ಅನ್ನ ಕೊಡುವ ರೈತನ ಕಣ್ಣೀರು ಮತ್ತು ರಕ್ತ ಈ ನೆಲದ ಮೇಲೆ ಬಿದ್ದರೆ ನಿಮ್ಮ ಇಡೀ ಸರ್ಕಾರ ಸರ್ವನಾಶವಾಗುವುದು ಗ್ಯಾರೆಂಟಿ ಎಂದು ಎಚ್ಚರಿಸಿರುವ ಆರ್. ಅಶೋಕ್, ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
ಆನೇಕಲ್‌ನ ಸರ್ಜಾಪುರ ಭಾಗದ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಕೂಡಲೇ ಕೈಬಿಡಬೇಕು.
ಅಮಾಯಕ ರೈತರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಮತ್ತು ಅದಕ್ಕೆ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು.
ಗಾಯಗೊಂಡ ಹಾಗೂ ಅನಾರೋಗ್ಯಕ್ಕೆ ಒಳಗಾದ ಪ್ರತಿಭಟನಾಕಾರರಿಗೆ ಸರ್ಕಾರವೇ ಸಂಪೂರ್ಣ ವೈದ್ಯಕೀಯ ವೆಚ್ಚ ಮತ್ತು ಸೂಕ್ತ ಪರಿಹಾರವನ್ನು ನೀಡಬೇಕು.
ಈ ರೈತ ವಿರೋಧಿ ಸರ್ಕಾರದ ದೌರ್ಜನ್ಯದ ವಿರುದ್ಧ ಬಿಜೆಪಿ ಕರ್ನಾಟಕ ಘಟಕವು ನೊಂದ ರೈತರ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಬಲವಾದ ಎಚ್ಚರಿಕೆ ನೀಡಿದ್ದಾರೆ.



