ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್ ಸುತ್ತಮುತ್ತ ಸಂಚಾರ ದಟ್ಟಣೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದಕ್ಕೆ ಪರಿಹಾರವಾಗಿ ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಸಂಚಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅತ್ತಿಬೆಲೆ ಸರ್ಕಲ್‌ನಲ್ಲಿ ನೂತನವಾಗಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್ ಲೈಟ್‌ಗೆ ಚಾಲನೆ ನೀಡಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು.
ಖಾಸಗಿ ವಲಯದ ಸಹಭಾಗಿತ್ವ: ಸರ್ಕಾರದ ಜನಸ್ನೇಹಿ ಕೆಲಸಗಳಿಗೆ ಖಾಸಗಿ ವಲಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕಿದೆ. ಟಿವಿಎಸ್ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿಯಿಂದ ಅಂದಾಜು 26 ಲಕ್ಷ ರೂ. ವೆಚ್ಚದಲ್ಲಿ ಅತ್ತಿಬೆಲೆ ಮುಖ್ಯ ವೃತ್ತದಲ್ಲಿ ಈ ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಸಚಿವರು ತಿಳಿಸಿದರು. ಬೊಮ್ಮಸಂದ್ರ ಮೇಲ್ಸೇತುವೆ ಕೆಳಗೆ ಈಗಾಗಲೇ ಈ ಮಾದರಿಯ ವ್ಯವಸ್ಥೆ ಜಾರಿಯಲ್ಲಿದೆ.
ಬೆಂಗಳೂರು ಸಿಟಿ ಕಮಿಷನರೇಟ್ ವ್ಯಾಪ್ತಿಗೆ ಆನೇಕಲ್: ಸದ್ಯ ಆನೇಕಲ್ ಪ್ರದೇಶವು ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇದು ಬೆಂಗಳೂರು ಸಿಟಿ ಕಮಿಷನರೇಟ್ ವಲಯಕ್ಕೆ ಸೇರ್ಪಡೆಯಾಗಲಿದೆ. ಇದರಿಂದ ಸಿಬ್ಬಂದಿ ಕೊರತೆ ನೀಗುವುದಲ್ಲದೆ, ಹೊಸದಾಗಿ ಮಹಿಳಾ ಪೊಲೀಸ್ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಇದ್ದ ಬೇಡಿಕೆ ಈಡೇರಲಿದೆ ಎಂದರು.
ಚಂದಾಪುರದಲ್ಲೂ ವಿಸ್ತರಣೆಗೆ ಒತ್ತಾಯ: ಇದೇ ಮಾದರಿಯಲ್ಲಿ ಚಂದಾಪುರದಲ್ಲೂ ಸಹ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಸ್ಥಳೀಯ ಶಾಸಕ ಬಿ. ಶಿವಣ್ಣ ಅಭಿಪ್ರಾಯಪಟ್ಟರು.
ಸಂಚಾರ ಸಮಯದ ನಿಗದಿ (ಟೈಮಿಂಗ್ಸ್): ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಎಎಸ್ಪಿ ಲಕ್ಷ್ಮಿನಾರಾಯಣ್ ಅವರು ಸಿಗ್ನಲ್ ಅವಧಿಯನ್ನು ಪ್ರಕಟಿಸಿದ್ದು, ಅದರಂತೆ
ಆನೇಕಲ್-ಸರ್ಜಾಪುರ ಹಾಗೂ ಸರ್ಜಾಪುರ-ಆನೇಕಲ್ ಮಾರ್ಗ: 60 ಸೆಕೆಂಡ್‌ಗಳು, ಚಂದಾಪುರ-ಹೊಸೂರು ಹಾಗೂ ಹೊಸೂರು-ಚಂದಾಪುರ ಮಾರ್ಗ: 45 ಸೆಕೆಂಡ್‌ಗಳು, ಪಾದಚಾರಿಗಳ ಸುಗಮ ಸಂಚಾರಕ್ಕೆ: 10 ಸೆಕೆಂಡ್‌ಗಳು ನಿಗದಿಪಡಿಸಲಾಗಿದೆ.




