ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಪಕ್ಷ ಬಿಜೆಪಿ ವಿರುದ್ಧ ಪ್ರತಿತಂತ್ರ ರೂಪಿಸುವ ಬದಲು, ಜನಸೇವೆಯತ್ತ ಗಮನಹರಿಸಿ ರಾಜ್ಯದ ಹಣಕಾಸು ಅಕ್ರಮಗಳಿಗೆ ಸೂಕ್ತ ಉತ್ತರ ನೀಡಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಖಂಡಿಸಿ ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಪ್ರಶ್ನಿಸಿದ್ದಾರೆ.
ಲೂಟಿಯಾದ ₹187 ಕೋಟಿ ಎಲ್ಲಿದೆ?: "ನಾಗೇಂದ್ರ ರಾಜೀನಾಮೆ ನೀಡಿದ ತಕ್ಷಣವೇ ಈ ಹಗರಣ ಮುಗಿದುಹೋಗಿಲ್ಲ. ಲೂಟಿಯಾದ 187 ಕೋಟಿ ರೂಪಾಯಿ ಇನ್ನೂ ಖಜಾನೆಗೆ ಮರಳಿಲ್ಲ. ಮೊದಲು ಆ ಹಣವನ್ನು ಸರ್ಕಾರದ ಖಜಾನೆಗೆ ಮರಳಿ ತರುವ ತಂತ್ರ ರೂಪಿಸಿ" ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ₹7,500 ಕೋಟಿ ಬಾಕಿ: ಕಳೆದ ವರ್ಷದ ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣ ₹7,500 ಕೋಟಿ ಏನಾಯಿತು? ಆ ಹಣವನ್ನು ತಡೆಹಿಡಿದು 'ಹೈದರಾಲಿ ಲೆಕ್ಕ' ನೀಡಲು ಹೊರಟವರು ಯಾರು? ರಾಜ್ಯದ ತಾಯಂದಿರಿಗೆ ತಲುಪಬೇಕಾದ ಹಣವನ್ನು ತಕ್ಷಣವೇ ತಲುಪಿಸಲು ತಂತ್ರ ರೂಪಿಸಿ ಎಂದು ಒತ್ತಾಯಿಸಿದ್ದಾರೆ.
ಕಮಿಷನ್ ದಂಧೆಗೆ ತಡೆ ಹಾಕಿ: ಬಿಜೆಪಿ ಹೋರಾಟ ನಡೆಸುತ್ತಿರುವುದು ರಾಜ್ಯ ಸರ್ಕಾರದ ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರದ ವಿರುದ್ಧ. ಅದನ್ನು ತಡೆಗಟ್ಟಲು ಆಡಳಿತ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಕೊಟ್ಟ ಕುದುರೆ ಏರಲರಿಯದ ಸರ್ಕಾರ: "ಅಧಿಕಾರ ನಿಮ್ಮ ಕೈಯಲ್ಲಿದೆ, ಕೊಟ್ಟ ಕುದುರೆಯನ್ನೇ ಏರಲಾಗದ ನೀವು ವಿರೋಧ ಪಕ್ಷದ ವಿರುದ್ಧ ಪ್ರತಿತಂತ್ರದ ಮಾತುಗಳನ್ನಾಡುವುದು ಹಾಸ್ಯಾಸ್ಪದ" ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆಯೇ ಕಾಂಗ್ರೆಸ್ ದುರಾಡಳಿತದ ವಿರುದ್ಧ ಅಂತಿಮ ತಂತ್ರ ರೂಪಿಸಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.




