ಚಂದ್ರವಳ್ಳಿ ನ್ಯೂಸ್, ದಾವಣಗೆರೆ
ದಾವಣಗೆರೆಯಲ್ಲಿ ಶನಿವಾರ ಸಂಜೆ ವಿಜೃಂಭಣೆಯಿಂದ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಅಪಘಾತವೊಂದು ಸಂಭವಿಸಿದೆ. ಮೆರವಣಿಗೆಯು ಪಿ.ಬಿ. ರಸ್ತೆಯ ಖಾಸಗಿ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದಾಗ, ಅಳವಡಿಸಲಾಗಿದ್ದ ಎಲ್‌ಇಡಿ ಕಮಾನಿನ ಮೇಲೆ ಹತ್ತಾರು ಯುವಕರು ಕುಳಿತಿದ್ದರು. ಯುವಕರ ಭಾರ ಹೆಚ್ಚಾದ ಕಾರಣ ಕಮಾನು ಏಕಾಏಕಿ ಮುರಿದು ಬಿದ್ದಿದೆ.
ಕಮಾನು ಕುಸಿದು ಬೀಳುತ್ತಿದ್ದಂತೆ ಅದರ ಮೇಲಿದ್ದ ಯುವಕರು ಹಾಗೂ ಕೆಳಗೆ ನಿಂತಿದ್ದ ಸಾರ್ವಜನಿಕರ ಮೇಲೆ ಬಿದ್ದಿದ್ದಾರೆ. ಈ ಆಘಾತಕಾರಿ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕಮಾನು ಬಿದ್ದ ರಭಸಕ್ಕೆ ಪಕ್ಕದಲ್ಲೇ ಇದ್ದ ಸಿದ್ದಲಿಂಗಪ್ಪ ಎಂಬ ವೃದ್ಧ ಹಾಗೂ ಕೆಲ ಯುವಕರಿಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಎಚ್ಚೆತ್ತ ಪೊಲೀಸರು ಮತ್ತು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಸಕತ್‌ಸಮಯೋಜನೆ ತೋರಿ ಗಾಯಾಳುಗಳನ್ನು ರಕ್ಷಿಸಿದ ಪೊಲೀಸರು ಹಾಗೂ ಸಾರ್ವಜನಿಕರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ತಕ್ಷಣವೇ ಕಮಾನನ್ನು ತೆರವುಗೊಳಿಸಿ, ಮುಂಜಾಗ್ರತಾ ಕ್ರಮವಾಗಿ ಡಿಜೆ ಶಬ್ದವನ್ನು ರದ್ದುಪಡಿಸಲಾಯಿತು.
ಬಾತಿ ಕೆರೆ ಬಳಿ ಗಣೇಶ ವಿಸರ್ಜನೆ ಹಾಗೂ ಡಿಜೆ ಬಂದ್ ವಿವಾದ
ನಗರದ ಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆಯು ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ ಹಾಗೂ ಪಿ.ಬಿ. ರಸ್ತೆ ಮೂಲಕ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಕ್ತಾಯಗೊಂಡಿತು. ಬಳಿಕ ಬಾತಿ ಕೆರೆ ಬಳಿ ನಿರ್ಮಿಸಲಾಗಿದ್ದ ಕೃತಕ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಧಿವಿಧಾನದೊಂದಿಗೆ ನಿಮಜ್ಜನ ಮಾಡಲಾಯಿತು.
ಈ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಯುವಕ-ಯುವತಿಯರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಆದರೆ, ರಾತ್ರಿ 9 ಗಂಟೆಯಾಗುತ್ತಿದ್ದಂತೆ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಪೊಲೀಸರು ಎಲ್ಲಾ ಡಿಜೆಗಳನ್ನು ಬಂದ್ ಮಾಡಿಸಿದರು. ಇದು ಆಯೋಜಕರು ಮತ್ತು ಯುವಕರ ಆಕ್ರೋಶಕ್ಕೆ ಕಾರಣವಾಯಿತು. ನಿಗದಿತ ಸಮಯದ ನಿರ್ಬಂಧ ವಿರೋಧಿಸಿ ಕೆಲ ಯುವಕರು ರಾತ್ರಿ ವೇಳೆ ಸ್ಥಳದಲ್ಲಿ ಸಣ್ಣ ಮಟ್ಟದ ಪ್ರತಿಭಟನೆ ನಡೆಸಿದ ಘಟನೆಯೂ ವರದಿಯಾಗಿದೆ.




