ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿಯ ವಾಪಸಂದ್ರ ಗ್ರಾಮದ ಹೊರವಲಯದಲ್ಲಿ ಮಧ್ಯಾಹ್ನ 3 ಘಂಟೆ ಸಮಯದಲ್ಲಿಯೇ ಚಿರತೆ ದಾಳಿ ನಡೆಸಿ ಕುರಿಯೊಂದನ್ನು ಕೊಂದು ಹಾಕಿರುವ ಘಟನೆ ಯೊಂದು ನಡೆದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಗ್ರಾಮದ ಕನಕರಾಜು ಸೇರಿದ ಕುರಿಯಾಗಿದ್ದು ಕುರಿ ಮೇಯಿಸಲು ಇವರ ಮಗ ಮಂಜುನಾಥ ಗ್ರಾಮದ ಹೊರವಲಯಕ್ಕೆ ತೆರಳುತ್ತಿದ್ದ ವೇಳೆ ಗಿಡ ಮರಗಳ ಪೊದೆಗಳಲ್ಲಿ ಅವಿತು ಕುಳಿತ್ತಿದ್ದ ಚಿರತೆ ಏಕಾಎಕಿ ದಾಳಿ ನಡೆಸಿ ಕುರಿಯನ್ನು ಕೊಂದು ರಕ್ತ ಹೀರುತ್ತಿದ್ದನ್ನು ಕಂಡ ಪಕ್ಕದಲ್ಲೇ ಇದ್ದ ರೈತರು ಜೋರಾಗಿ ಕೂಗಾಟ ಕೇಳಿ ಚಿರತೆ ಪರಾರಿಯಾಗಿದೆ.
ಕಳೆದ ಕೆಲ ದಿನಗಳಿಂದ ವಾಪಸಂದ್ರ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಕೋಳಿ ಹಾಗೂ ಸಾಕು ನಾಯಿಯನ್ನು ಬಲಿ ಪಡೆದಿತ್ತು ಎನ್ನಲಾಗಿದೆ. ಇದೀಗ ಕುರಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವುದು ಮತ್ತಷ್ಟು ಭೀತಿ ಮೂಡಿಸಿದೆ.
ಇದೇ ವ್ಯಾಪ್ತಿಯಲ್ಲಿ ಚಿರತೆ ದಾಳಿ ಪ್ರಕರಣಗಳು ಮುಂದುವರೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿಗಷ್ಟೇ ಕಲ್ಲುಕುಂಟೆ ಹಾಗೂ ಪಚ್ಚಾರಲಹಳ್ಳಿ ಗ್ರಾಮಗಳಲ್ಲೂ ಚಿರತೆ ದಾಳಿ ನಡೆಸಿ ಕುರಿಗಳನ್ನು ಕೊಂದು ಹಾಕಿತ್ತು.
ಸಾಸಲು ಹೋಬಳಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆದಾರರು ತಮ್ಮ ಕುರಿಗಳನ್ನು ಮೇಯಿಸಲು ಹೊಲ, ಜಮೀನು ಹಾಗೂ ಗ್ರಾಮಗಳ ಹೊರವಲಯಕ್ಕೆ ಕರೆದೊಯ್ಯುತ್ತಾರೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಚಿರತೆ ದಾಳಿಗಳು ಕುರಿಗಾಹಿಗಳಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿವೆ.
ಕುರಿಗಳ ಮೇಲೆ ಪದೇಪದೇ ಚಿರತೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿರತೆಯ ಓಡಾಟದ ಕುರಿತು ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಾಗದಲ್ಲಿ ಬೆಟ್ಟ ಗುಡ್ಡಗಳು ಹೆಚ್ಚಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳಬೇಕಾಗಿದೆ.
“ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಿಬ್ಬಂದಿ ಅವುಗಳನ್ನು ಸೆರೆಹಿಡಿಯಲು ತೀವ್ರವಾಗಿ ಶ್ರಮ ಪಡುತ್ತಿದ್ದಾರೆ. ಅದರೆ ಅವುಗಳು ಬೋನಿಗೆ ಬೀಳುತ್ತಿಲ್ಲ.
ಚಿಂತೆಯದಾಳಿಯಿಂದ ಕುರಿ ಬಲಿಯಾಗಿರುವ ನಷ್ಟವನ್ನು ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು”.
ಹಂಸವಿ, ಉಪವಲಯಾಧಿಕಾರಿ, ದೊಡ್ಡ ಬಳ್ಳಾಪುರ.




