ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಹಿರಿಯೂರು ವಿಧಾನಸಭಾ ಕ್ಷೇತ್ರದ ಮತದಾರರು ಇನ್ಮುಂದೆಯಾದರೂ ಸ್ವಾಭಿಮಾನಿಗಳಾಗಬೇಕು. ಕಳೆದ ಆರೇಳು ದಶಕಗಳಿಂದ ಹೊರಗಿನ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತಾ ಬಂದ ಪರಿಣಾಮ ನಮ್ಮ ನೆಲ, ಜಲದ ಅಸ್ಮಿತೆ ಮತ್ತು ಅಭಿವೃದ್ಧಿ ತೀವ್ರ ಹಿನ್ನಡೆ ಅನುಭವಿಸಿದೆ. ಈ ಬಾರಿ ಇಡೀ ಮತದಾರರು ಒಂದಾಗಿ ನಮ್ಮದೇ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು," ಎಂದು ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಅಧ್ಯಕ್ಷರು ಹಾಗೂ ಬಿಬಿಎಂಪಿಯ ವಿಶ್ರಾಂತ ಉಪ ಆಯುಕ್ತರಾದ ಡಾ. ಜೆ. ರಾಜು (ಬೇತೂರು ಪಾಳ್ಯ) ಅವರು ಅತ್ಯಂತ ಭಾವುಕರಾಗಿ ನುಡಿದರು.
ನಗರದ ರೋಟರಿ ಭವನದಲ್ಲಿ ಭಾನುವಾರ ಹಿರಿಯೂರು ತಾಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಕುಂಚಿಟಿಗ ಮಕ್ಕಳ ಪ್ರತಿಭಾ ಪುರಸ್ಕಾರ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ಅಸ್ಮಿತೆಗೆ ಧಕ್ಕೆ: 70 ವರ್ಷಗಳ ನೋವು!
ಹಿರಿಯೂರು ವಿಧಾನಸಭಾ ಕ್ಷೇತ್ರದ ಇತಿಹಾಸವನ್ನು ನೆನೆದು ಆತಂಕ ವ್ಯಕ್ತಪಡಿಸಿದ ಡಾ. ಜೆ. ರಾಜು, ಹೊರಗಿನವರ ರಾಜಕಾರಣದಿಂದ ಹಿರಿಯೂರು ಅನುಭವಿಸುತ್ತಿರುವ ಸಾಂಸ್ಕೃತಿಕ ಮತ್ತು ಆರ್ಥಿಕ ನಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸ್ಥಳೀಯರು ಆಯ್ಕೆಯಾಗುತ್ತಿಲ್ಲವಾದ್ದರಿಂದ ಹೊರಗಿನವರಿಗೆ ಇಚ್ಚಾಸಕ್ತಿ ಕಡಿಮೆ ಇರುವುದರಿಂದ ಅವರುಗಳು ಸಂತೆ ಮಾಡಿಕೊಂಡು ಹೋಗುತ್ತಿದ್ದು ಇದು ಹಿರಿಯೂರು ಅಭಿವೃದ್ಧಿಗೆ ಮಾರಕವಾಗಿದೆ ಎಂದು ರಾಜು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯರ ಕಡೆಗಣನೆ: ಕಳೆದ 60-70 ವರ್ಷಗಳಿಂದ ಕ್ಷೇತ್ರದ ಜನತೆ ಸ್ಥಳೀಯರನ್ನು ಕಡೆಗಣಿಸಿ ಆಮಿಷಗಳಿಗೆ ಬಲಿಯಾಗಿ ಹೊರಗಿನಿಂದ ಬಂದ ನಾಯಕರಿಗೆ ಮಣೆ ಹಾಕುತ್ತಾ ಬಂದಿದ್ದಾರೆ. ಆದರೆ, ಇದರಿಂದ ಕ್ಷೇತ್ರದ ಒಟ್ಟಾರೆ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಕುಂಠಿತ: ಸ್ಥಳೀಯರ ನೋವು-ನಲಿವುಗಳು, ಇಲ್ಲಿನ ಭೌಗೋಳಿಕ ಸಮಸ್ಯೆಗಳು, ನೀರಾವರಿ ಸೌಲಭ್ಯ, ಶಿಕ್ಷಣ, ಅಭಿವೃದ್ಧಿ ಸೇರಿದಂತೆ ಮತ್ತಿತರ ವಿಚಾರಗಳು ಹೊರಗಿನವರಿಗೆ ಹತ್ತಿರದಿಂದ ಗೊತ್ತಿಲ್ಲದ ಕಾರಣ ಕ್ಷೇತ್ರದ ಪ್ರಗತಿ ತೀವ್ರವಾಗಿ ಹಿನ್ನಡೆ ಸಾಧಿಸಿದೆ ಎಂದು ರಾಜು ಬೇಸರ ವ್ಯಕ್ತಪಡಿಸಿದರು.
ಸ್ವಾಭಿಮಾನದ ಜಾಗೃತಿ: ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಹಿರಿಯೂರಿನ ಮಣ್ಣಿನ ಮಕ್ಕಳಿಗೇ ಟಿಕೆಟ್ ನೀಡಬೇಕು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ, ತಮ್ಮದೇ ತಾಲೂಕಿನ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಸ್ವಾಭಿಮಾನ ಮೆರೆಯಬೇಕು. ಅಲ್ಲದೆ ಹಿರಿಯೂರು ಕ್ಷೇತ್ರದ ಜನತೆ ದುಡ್ಡಿಗಾಗಿ ಮತ ಮಾರಿಕೊಳ್ಳುತ್ತಾರೆ ಎನ್ನುವ ಕೆಟ್ಟ ಅಪವಾದ ದೂರ ಮಾಡಬೇಕೆಂದು ಅವರು ಮನವಿ ಮಾಡಿದರು.
"ನಮ್ಮ ನೆಲದ ಕಣ್ಣೀರನ್ನು ಒರೆಸಲು ನಮ್ಮದೇ ಮಣ್ಣಿನ ಮಗ ಬರಬೇಕೇ ಹೊರತು, ಹೊರಗಿನವರಲ್ಲ. ಹಿರಿಯೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಪಕ್ಷಾತೀತವಾಗಿ ಒಂದಾಗಬೇಕಾದ ಸಮಯ ಬಂದಿದೆ."
ಡಾ. ಜೆ. ರಾಜು, ಟಿಕೆಟ್ ಆಕಾಂಕ್ಷಿ.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಕುಂಚಿಟಿಗ ಸಂಘದ ಪದಾಧಿಕಾರಿಗಳು, ಹಿರಿಯರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಡಾ. ರಾಜು ಅವರ ಸ್ಥಳೀಯ ಅಸ್ಮಿತೆಯ ಕರೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.
ಎಲೆರಾಂಪುರ ಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಮಾಜಿ ಜಿಪಂ ಅಧ್ಯಕ್ಷ ಎಂ.ಜಯಣ್ಣ, ಕೆಎಎಸ್ ಅಧಿಕಾರಿ ಪಿಟ್ಲಾಲಿ ಸುಷ್ಮಾ, ತಾಲೂಕು ಅಧ್ಯಕ್ಷ ಪ್ರೊ.ಮೈಸೂರು ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಜಿ. ಹನುಮಂತರಾಯ, ಗೌರವಾಧ್ಯಕ್ಷ ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜ್, ಹರಿಯಬ್ಬೆ ಹೆಂಜಾರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯ, ಪತ್ರಕರ್ತ ಆಲೂರು ಹನುಮಂತರಾಯಪ್ಪ ಸೇರಿದಂತೆ ಮತ್ತಿತರರು ಇದ್ದರು.



