ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಸ್ವಾತಂತ್ರ್ಯ ಬಂದಾಗಿನಿಂದ ನಡೆದ ಬಹುತೇಕ ಚುನಾವಣೆಗಳಲ್ಲಿ ಹೊರಗಡೆಯಿಂದ ಬಂದವರೇ ಅಧಿಕಾರ ನಡೆಸಿ ತಾಲೂಕನ್ನು ಬರಡು ಮಾಡಿದ್ದಾರೆ. ಇನ್ನಾದರೂ ಕ್ಷೇತ್ರದ ಜನತೆ ಎಚ್ಚೆತ್ತುಕೊಂಡು ಮುಂಬರುವ ಉಪ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್ ನೀಡಬೇಕು" ಎಂದು ಹಿರಿಯೂರು ತಾಲೂಕು ಸ್ಥಳೀಯರ ಸ್ವಾಭಿಮಾನ ವೇದಿಕೆಯ ಮುಖಂಡ ಬೇತುರು ಪಾಳ್ಯ ರಾಜು ಆಗ್ರಹಿಸಿದರು.
ನಗರದಲ್ಲಿ ಆಯೋಜಿಸಲಾಗಿದ್ದ 'ಸ್ಥಳೀಯರ ಸ್ವಾಭಿಮಾನ ವೇದಿಕೆ: ಜನಾಭಿಪ್ರಾಯ ಉಪ ಚುನಾವಣೆ - 2026' ಸಭೆಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಹೊರಗಿನವರ ರಾಜಕಾರಣದಿಂದ ತಾಲೂಕಿಗೆ ಆಗಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ವ್ಯಾಪಾರಿ ಮನೋಭಾವದ ರಾಜಕಾರಣ: ನಿವೃತ್ತ ನಿರ್ದೇಶಕ ರುದ್ರಪ್ಪ ಆತಂಕ
ಸಭೆಯಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ರುದ್ರಪ್ಪ ಅವರು, ಹೊರಗಿನಿಂದ ಬರುವ ರಾಜಕಾರಣಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಹೊರಗಿನವರು ಕೇವಲ ವ್ಯಾಪಾರಿ ಮನೋಭಾವದಿಂದ ಇಲ್ಲಿಗೆ ಬರುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಹಣ ಹಂಚಿ, ಮತಗಳನ್ನು ಕೊಂಡು ಗೆದ್ದು ಹೋಗುತ್ತಾರೆ. ಒಮ್ಮೆ ಗೆದ್ದ ನಂತರ ಅವರು ಕ್ಷೇತ್ರದ ಜನತೆಗೆ ಸಿಗುವುದೇ ಇಲ್ಲ," ಎಂದು ಅಸಮಾಧಾನ ಹೊರಹಾಕಿದರು.
ಸ್ಥಳೀಯ ಸಮಸ್ಯೆಗಳು ಗೌಣ: ಕಾರ್ಮಿಕ ಪರಿಷತ್ ಅಧ್ಯಕ್ಷ ಪರಮೇಶ್
ಕಾರ್ಮಿಕ ಪರಿಷತ್ ಅಧ್ಯಕ್ಷ ಪರಮೇಶ್ ಮಾತನಾಡಿ, "ಹೊರಗಿನಿಂದ ಬರುವ ನಾಯಕರು ಚುನಾವಣೆ ಮುಗಿದ ತಕ್ಷಣ ಮಾಯವಾಗುತ್ತಾರೆ. ಇದರಿಂದಾಗಿ ಕ್ಷೇತ್ರದ ಸ್ಥಳೀಯ ಸಮಸ್ಯೆಗಳು ಸಂಪೂರ್ಣವಾಗಿ ಗೌಣವಾಗುತ್ತಿವೆ. ನಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸುವ ಸ್ಥಳೀಯ ನಾಯಕತ್ವ ಇಂದಿನ ತುರ್ತು ಅಗತ್ಯವಾಗಿದೆ," ಎಂದರು.
ಮತ ಮಾರಿಕೊಂಡರೆ ಪರಿತಾಪ ಫಿಕ್ಸ್: ಪಿ.ಆರ್. ದಾಸ್ ಎಚ್ಚರಿಕೆ:
ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿ.ಆರ್. ದಾಸ್ ಮಾತನಾಡಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. "ಚುನಾವಣೆಯ ಸಂದರ್ಭದಲ್ಲಿ ಹಣದ ಆಮಿಷಕ್ಕೆ ಒಳಗಾಗಿ ಮತ ಮಾರಿಕೊಂಡರೆ, ಮುಂದಿನ ಐದು ವರ್ಷಗಳ ಕಾಲ ಪಡಬಾರದ ಪಾಡು ಪಡಬೇಕಾಗುತ್ತದೆ, ಪರಿತಪಿಸಬೇಕಾಗುತ್ತದೆ," ಎಂದು ಎಚ್ಚರಿಸಿದರು.
ಜಾತಿ-ಧರ್ಮ ಮರೆತು ಸ್ಥಳೀಯರನ್ನು ಗೆಲ್ಲಿಸಿ: ಪ್ರೊ. ಚಂದ್ರಶೇಖರ್ ಕರೆ
"ಈ ಬಾರಿ ಚುನಾವಣೆಯಲ್ಲಿ ಜಾತಿ, ವರ್ಗ ಹಾಗೂ ಧರ್ಮದ ಬೇಲಿಗಳನ್ನು ಬದಿಗಿಟ್ಟು, ಕೇವಲ ಸ್ಥಳೀಯ ಅಭ್ಯರ್ಥಿಯ ಗೆಲುವಿಗಾಗಿ ನಾವೆಲ್ಲರೂ ಒಂದಾಗಬೇಕು," ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ಕರೆ ನೀಡಿದರು.
ಹಿರಿಯೂರಿನಲ್ಲಿ ಕುಡಿಯುವ ನೀರಿಗೂ ತತ್ವಾರ: ಬಾಬುಲಾಲ್ ಬಲಾರ್ ಆಕ್ರೋಶ
ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವುದನ್ನು ಪ್ರಸ್ತಾಪಿಸಿದ ಬಾಬುಲಾಲ್ ಬಲಾರ್, "ಇತರ ಊರುಗಳಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಸಿಗುತ್ತದೆ. ಆದರೆ ಇಷ್ಟೊಂದು ಪ್ರಮುಖವಾಗಿರುವ ಹಿರಿಯೂರಿನಲ್ಲಿ ಜನರಿಗೆ ಕುಡಿಯುವ ನೀರೇ ಸಿಗುತ್ತಿಲ್ಲ. ಇದು ಅತ್ಯಂತ ದುರ್ದೈವದ ಸಂಗತಿ," ಎಂದು ವಿಪರ್ಯಾಸವನ್ನು ಬಿಚ್ಚಿಟ್ಟರು.
ಇದೇ ವೇಳೆ ಮಾತನಾಡಿದ ದೇವರಕೊಟ್ಟ ಜಿ.ಒ ನಾಗರಾಜ್ ಅವರು, "ಪ್ರಸ್ತುತ ದಿನಗಳಲ್ಲಿ ಮತದಾರರು ಹಣವನ್ನು ನೋಡುತ್ತಿದ್ದಾರೆಯೇ ಹೊರತು, ಅಭ್ಯರ್ಥಿ ಸ್ಥಳೀಯನೇ ಅಥವಾ ಒಳ್ಳೆಯವನೇ ಎಂಬುದನ್ನು ಗಮನಿಸುತ್ತಿಲ್ಲ," ಎಂದು ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಅಭ್ಯರ್ಥಿಗಾಗಿ ಒಕ್ಕೊರಲ ಒತ್ತಾಯ:
ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಪ್ರಾಂಶುಪಾಲ ಜಯಣ್ಣ, ಜಾನ್ ಮೈಕಲ್, ಧರ್ಮಪುರ ಕೃಷ್ಣಮೂರ್ತಿ ಸೇರಿದಂತೆ ನೂರಾರು ಪ್ರಮುಖರು ಭಾಗವಹಿಸಿ, ಈ ಬಾರಿಯ ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹೊರಗಿನವರಿಗೆ ಮಣಿಯದೆ, ಕೇವಲ ಸ್ಥಳೀಯ ವ್ಯಕ್ತಿಗೇ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.



