ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಭಾಗದಲ್ಲಿ ಉದ್ದೇಶಿತ ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ (ಟೌನ್‌ಶಿಪ್) ಯೋಜನೆಗಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ಕ್ರಮದ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿರುವುದನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ರೈತರ ಒಪ್ಪಿಗೆ ಅತ್ಯಗತ್ಯ: ಬಿಡದಿ ಭಾಗದಲ್ಲಿ ಟೌನ್‌ಶಿಪ್ ಮಾಡುವುದಾದರೆ ಮೊದಲು ಅಲ್ಲಿನ ಅನ್ನದಾತರ, ರೈತರ ಒಪ್ಪಿಗೆಯನ್ನು ಪಡೆದು ಮುಂದುವರಿಯಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಗಧಾಪ್ರಹಾರ ಮಾಡುತ್ತಿರುವುದು ಯಾಕೆ?: ಯೋಜನೆಯನ್ನು ಸ್ಥಳೀಯ ರೈತರು ಸಂಪೂರ್ಣವಾಗಿ ವಿರೋಧಿಸುತ್ತಿದ್ದಾರೆ. ಹೀಗಿರುವಾಗ ಅವರ ಇಚ್ಛೆಗೆ ವಿರುದ್ಧವಾಗಿ ಅವರ ಮೇಲೆ ಸರ್ಕಾರ ಗಧಾಪ್ರಹಾರ ಮಾಡುತ್ತಿರುವುದು ಯಾಕೆ? ಎಂದು ಅವರು ರಾಜ್ಯ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಭೈರಮಂಗಲಕ್ಕೆ ಭೇಟಿ: ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸಂತ್ರಸ್ತರಾಗಲಿರುವ ರೈತರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳ ಅಹವಾಲು ಆಲಿಸಲು ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 27 ರಂದು ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಈ ಭೇಟಿಯ ಮುನ್ನಾದಿನವೇ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಕಿತ್ತುಕೊಳ್ಳುವ ಸರ್ಕಾರದ ಯಾವುದೇ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಕೇಂದ್ರ ಸಚಿವರು, ಈ ಹೋರಾಟದಲ್ಲಿ ತಾವು ರೈತರ ಪರವಾಗಿ ಗಟ್ಟಿಯಾಗಿ ನಿಲ್ಲುವುದಾಗಿ ಪುನರುಚ್ಚರಿಸಿದ್ದಾರೆ.



