Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜಾತ್ಯತೀತತೆಯ ಜಗದ್ಗುರು—ಡಾ. ಜಿ.ವಿ. ಮಂಜುನಾಥ

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕಿನ ಆರ್. ನುಲೇನೂರು ಗ್ರಾಮದ ಶಿವಶರಣ ನುಲಿಯ ಚಂದಯ್ಯನವರ ಅನುಭವ ಮಂಟಪದಲ್ಲಿ ಹುಣ್ಣಿಮೆಯ ಪ್ರಯುಕ್ತ ನಡೆದ
100ನೇ ಶಿವಾನುಭವ ಗೋಷ್ಠಿಯಲ್ಲಿ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಡಾ. ಜಿ.ವಿ. ಮಂಜುನಾಥ ಅವರು “ಲಿಂಗೈಕ್ಯ ಜಗದ್ಗುರು ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾಧನಾಪಥ” ವಿಷಯ ಕುರಿತು ಉಪನ್ಯಾಸ ನೀಡಿದರು.

ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಇಪ್ಪತ್ತನೆಯ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜಾತಿ, ಕುಲ, ಮತ ಮತ್ತು ಪಂಥಗಳ ಎಲ್ಲ ಭೇದಗಳನ್ನು ಮೀರಿ ಮನುಷ್ಯನನ್ನು ಮೊದಲು ಮನುಷ್ಯನಾಗಿ ಕಾಣಬೇಕು ಎಂಬ ಬಸವತತ್ತ್ವವನ್ನು ಕೇವಲ ಬೋಧಿಸದೆ, ತಮ್ಮ ಬದುಕಿನ ಮೂಲಕ ಅನುಷ್ಠಾನಗೊಳಿಸಿದ ಮಹಾನ್ ಸಮಾಜಮುಖಿ ಸಂತರು ಎಂದು ಅವರು ಹೇಳಿದರು.

Advertisement

 1946ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಮತ್ತು ಪ್ರಸಾದ ನಿಲಯವನ್ನು ಆರಂಭಿಸಿದ ಜಗದ್ಗುರುಗಳು, ವಿವಿಧ ಜಾತಿ ಮತ್ತು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಕಲ್ಪಿಸಿದರು. ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಮನೋಭಾವ ಬಲವಾಗಿದ್ದ ಕಾಲದಲ್ಲಿ ಸಹಪಂಕ್ತಿ ಭೋಜನವನ್ನು ಜಾರಿಗೆ ತಂದದ್ದು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿತ್ತು. ದಲಿತರು, ಹಿಂದುಳಿದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವರು ಶ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ಮೂಲಕ, ವಿಶೇಷವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದರು. ಶಿಕ್ಷಣವೆಂಬುದು ಕೆಲವೇ ವರ್ಗಗಳ ಸ್ವತ್ತಾಗದೆ ಸಮಾಜದ ಪ್ರತಿಯೊಬ್ಬರಿಗೂ ದೊರೆಯಬೇಕು ಎಂಬ ವಿಶಾಲ ದೃಷ್ಟಿಕೋನವನ್ನು ಅವರು ಹೊಂದಿದ್ದರು.

ಜಗದ್ಗುರುಗಳ ಜಾತ್ಯತೀತ ದೃಷ್ಟಿಕೋನವು ಸಹಪಂಕ್ತಿ ಭೋಜನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಪ್ರತಿಯೊಬ್ಬ ಮನುಷ್ಯನನ್ನೂ ಸಮಾನ ಗೌರವದಿಂದ ಕಾಣಬೇಕು ಮತ್ತು ಅವರವರ ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡಬೇಕು ಎಂಬ ವಿಶಾಲ ಮಾನವೀಯ ಮನೋಭಾವ ಅವರ ಬದುಕಿನಲ್ಲಿ ಕಾಣುತ್ತದೆ. ಸಿರಿಗೆರೆಯ ಪ್ರಸಾದ ನಿಲಯದಲ್ಲಿ ವಿವಿಧ ಜಾತಿ ಮತ್ತು ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳು ಒಟ್ಟಾಗಿ ವಾಸಿಸಿ ವಿದ್ಯಾಭ್ಯಾಸ ಮಾಡುವ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಆಚರಣೆಯಂತೆ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂಬ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಯೂ ಈ ಧಾರ್ಮಿಕ ಸೌಹಾರ್ದದ ಮನೋಭಾವಕ್ಕೆ ಉದಾಹರಣೆಯಾಗಿದೆ. ಆದಿಜಾಂಬವ ಮಠದ ಜಗದ್ಗುರು ಶ್ರೀ ರುದ್ರಮುನಿ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ತಮ್ಮ ಮಠದ ಆನೆ, ಕುದುರೆ ಹಾಗೂ ಸಕಲ ಬಿರುದಾವಳಿಗಳೊಂದಿಗೆ ನಡೆಸುವಂತೆ ಮಾಡಿದ್ದು, ಭರಮಸಾಗರದಲ್ಲಿ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅವರ ವಿಶಾಲ ಧಾರ್ಮಿಕ ದೃಷ್ಟಿಕೋನದ ನಿದರ್ಶನಗಳಾಗಿವೆ. ವ್ಯಕ್ತಿಯ ಜನ್ಮಕ್ಕಿಂತ ಅವನ ಗುಣ, ನಡತೆ ಮತ್ತು ಮಾನವೀಯತೆ ಮುಖ್ಯ ಎಂಬ ಸಂದೇಶವನ್ನು ಅವರು ತಮ್ಮ ನಡೆ-ನುಡಿಗಳ ಮೂಲಕ ಸಾರಿದರು.

“ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ” ಎಂಬ ಬಸವಣ್ಣನವರ ವಚನದ ಆಶಯವನ್ನು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸಾಕಾರಗೊಳಿಸಿದ ಜಗದ್ಗುರುಗಳು ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವೆಂದು ಪರಿಗಣಿಸಿದ್ದರು. ಬಡವರು, ದಲಿತರು, ಹಿಂದುಳಿದವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸುವ ಮೂಲಕ ಅವರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದರು. ಶಿಕ್ಷಣದ ಮೂಲಕ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ಸಬಲೀಕರಣ ಸಾಧ್ಯ ಎಂಬುದನ್ನು ಅರಿತಿದ್ದ ಅವರು, ಮಠದ ಶಿಕ್ಷಣ ಸಂಸ್ಥೆಗಳನ್ನು ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೂ ತೆರೆದಿಟ್ಟರು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದ ಆದ್ಯತೆ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸಿದರು. ಒಂದು ಪೀಳಿಗೆಯ ಶಿಕ್ಷಣವು ಮುಂದಿನ ಹಲವು ಪೀಳಿಗೆಗಳ ಬದುಕನ್ನು ಬದಲಾಯಿಸಬಲ್ಲದು ಎಂಬುದನ್ನು ಅವರ ಶೈಕ್ಷಣಿಕ ಸೇವೆ ಸಾಬೀತುಪಡಿಸುತ್ತದೆ ಎಂದು ಡಾ. ಮಂಜುನಾಥ ಹೇಳಿದರು.

ಶರಣ ಸಾಹಿತ್ಯ ಮತ್ತು ಬಸವತತ್ತ್ವದ ಪ್ರಸಾರಕ್ಕೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿಶೇಷ ಆದ್ಯತೆ ನೀಡಿದರು. ಶರಣರ ಜಯಂತಿಗಳು, ವಚನಗಾಯನ, ವಿಚಾರಗೋಷ್ಠಿಗಳು, ಸರ್ವಶರಣ ಸಮ್ಮೇಳನಗಳು ಹಾಗೂ ಶಿವಾನುಭವ ಪ್ರವಾಸಗಳ ಮೂಲಕ ಶರಣರ ತತ್ತ್ವ, ವಚನ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ‘ಶರಣಸತಿ ಲಿಂಗಪತಿ’, ‘ಮರಣವೇ ಮಹಾನವಮಿ’, ‘ವಿಶ್ವಬಂಧು ಮರುಳಸಿದ್ಧ’ ಮೊದಲಾದ ನಾಟಕಗಳನ್ನು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿಯೂ ಪ್ರದರ್ಶಿಸುವ ಮೂಲಕ ಶರಣರ ವಿಚಾರಧಾರೆಯನ್ನು ಜನಮನಕ್ಕೆ ತಲುಪಿಸಿದರು.

ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳಿಗೂ ಪ್ರೋತ್ಸಾಹ ನೀಡುವ ಮೂಲಕ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದರು. ಹೀಗೆ ಶಿಕ್ಷಣ, ಸಹಪಂಕ್ತಿ ಭೋಜನ, ಸಾಮಾಜಿಕ ಸಬಲೀಕರಣ, ಧಾರ್ಮಿಕ ಸೌಹಾರ್ದ, ಶರಣ ಸಾಹಿತ್ಯ ಪ್ರಸಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಸವತತ್ತ್ವವನ್ನು ಜನಜೀವನದಲ್ಲಿ ಅಳವಡಿಸಲು ಅವರು ನಿರಂತರವಾಗಿ ಶ್ರಮಿಸಿದರು. ಅವರ ಜೀವನವು ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ತತ್ತ್ವಗಳ ಜೀವಂತ ವ್ಯಾಖ್ಯಾನದಂತಿತ್ತು ಎಂದು ಡಾ. ಮಂಜುನಾಥ ವಿವರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದ ಪೂಜ್ಯ ತಿಪ್ಪೇರುದ್ರ ಸ್ವಾಮಿಗಳು ಆಶೀರ್ವಚನ ನೀಡಿ, ಮಡಿವಾಳ ಮಾಚಿದೇವರು ಮತ್ತು ಸಿರಿಗೆರೆಯ ಲಿಂಗೈಕ್ಯ ಜಗದ್ಗುರುಗಳ ಆದರ್ಶ ಮತ್ತು ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅವುಗಳನ್ನು ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶರಣ ಚಂದಯ್ಯನವರು, ನಿವೃತ್ತ ಉಪನ್ಯಾಸಕರಾದ ಶರಣ ಚಂದ್ರಶೇಖರಪ್ಪ ಸೇರಿದಂತೆ ನುಲೆ ನೂರು ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಶರಣ - ಶರಣೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ