ಚಂದ್ರವಳ್ಳಿ ನ್ಯೂಸ್, ಸಕಲೇಶಪುರ/ಹಾಸನ:
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ 'ಕಸ್ತೂರಿ ರಂಗನ್ ವರದಿ' ಜಾರಿ ಮತ್ತು ಅದರಿಂದ ಸ್ಥಳೀಯ ಮೇಲಾಗುವ ಪರಿಣಾಮಗಳ ಕುರಿತು ಸಾರ್ವಜನಿಕರೊಂದಿಗೆ ಆಯೋಜಿಸಲಾಗಿದ್ದ ನೇರ ಸಂವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಸ್ಥಳೀಯ ಜನರ ಹಿತಾಸಕ್ತಿಯ ಕುರಿತು ಮಹತ್ವದ ಚರ್ಚೆಗಳು ಜರುಗಿದವು.
ಮಲೆನಾಡು ಭಾಗದ ಜನರ ಆತಂಕ ಹಾಗೂ ವರದಿಯ ಕುರಿತ ಅಭಿಪ್ರಾಯಗಳನ್ನು ನೇರವಾಗಿ ಆಲಿಸಿದ ಅವರು, ಸಾರ್ವಜನಿಕರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದರು.
ಈ ಮಹತ್ವದ ಕಾರ್ಯಕ್ರಮದಲ್ಲಿ ಸಚಿವರಾದ ಶಿವಲಿಂಗೇಗೌಡ, ಸಂಸದರಾದ ಶ್ರೇಯಸ್ ಪಟೇಲ್, ಜಿ.ಸಿ. ಚಂದ್ರಶೇಖರ್ ಹಾಗೂ ಶಾಸಕರಾದ ಸಿಮೆಂಟ್ ಮಂಜು, ಟಿ.ಡಿ. ರಾಜೇಗೌಡ ಅವರು ಭಾಗವಹಿಸಿದ್ದರು.
ಅಲ್ಲದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಬಿ.ಆರ್. ಗುರುದೇವ್, ಹೆಚ್.ಎಂ. ವಿಶ್ವನಾಥ್, ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.




