ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ವಾಹನ ಮಾಲೀಕರಿಗೆ ಹಣದ ಆಮಿಷವೊಡ್ಡಿ, ಲೋನ್ ತೀರಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಕುಖ್ಯಾತ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುರುಪ್ರಸಾದ್ (44) ಎಂದು ಗುರುತಿಸಲಾಗಿದೆ. ಆತನಿಂದ ಬರೋಬ್ಬರಿ 1 ಕೋಟಿ 51 ಲಕ್ಷ ರೂಪಾಯಿ ಮೌಲ್ಯದ ಒಟ್ಟು 23 ವಿವಿಧ ವಾಹನಗಳನ್ನು (14 ಕಾರುಗಳು, 1 ಗೂಡ್ಸ್ ವಾಹನ, 2 ಆಟೋರಿಕ್ಷಾಗಳು ಹಾಗೂ 6 ದ್ವಿಚಕ್ರ ವಾಹನಗಳು) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಂಚನೆಯ ಅಸಲಿ ಜಾಲ ಹೇಗೆ ಕೆಲಸ ಮಾಡುತ್ತಿತ್ತು?:
ಟಾರ್ಗೆಟ್: ವಾಹನಗಳ ಮೇಲಿನ ಸಾಲ ಮರುಪಾವತಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟದಲ್ಲಿದ್ದ ಮಾಲೀಕರನ್ನು ಆರೋಪಿ ಗುರುಪ್ರಸಾದ್ ಟಾರ್ಗೆಟ್ ಮಾಡುತ್ತಿದ್ದ.
ಮುಂಗಡ ಆಮಿಷ: ಸಂಕಷ್ಟದಲ್ಲಿದ್ದ ಮಾಲೀಕರಿಗೆ ಪರಿಚಯ ಮಾಡಿಕೊಂಡು 1 ರಿಂದ 2 ಲಕ್ಷ ರೂಪಾಯಿ ಮುಂಗಡ ಹಣ ನೀಡಿ, "ನಾನೇ ನಿಮ್ಮ ವಾಹನದ ಲೋನ್ ಕ್ಲಿಯರ್ ಮಾಡುತ್ತೇನೆ" ಎಂದು ನಂಬಿಸಿ ಕಾರನ್ನು ಅಡಮಾನದ ಹೆಸರಿನಲ್ಲಿ ಪಡೆದುಕೊಳ್ಳುತ್ತಿದ್ದ.
ನಯವಂಚನೆ: ಮಾಲೀಕರಿಗೆ ಕೊಟ್ಟ ಮಾತಿನಂತೆ ವಾಹನದ ಲೋನ್ ಕಟ್ಟದೆ, ಅಸಲಿ ಮಾಲೀಕರಿಗೆ ತಿಳಿಯದಂತೆ ಅದೇ ವಾಹನವನ್ನು ಬೇರೆಯವರಿಗೆ 5 ರಿಂದ 10 ಲಕ್ಷ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದ ಅಥವಾ ಬೇರೆಡೆ ಅಡಮಾನವಿಟ್ಟು ಹಣ ಎಗರಿಸುತ್ತಿದ್ದ.
ಪರಾರಿ: ಮೂಲ ಮಾಲೀಕರ ಹೆಸರಿನಲ್ಲೇ ಲೋನ್ ಬಾಕಿ ಉಳಿದುಕೊಳ್ಳುತ್ತಿರುವುದರಿಂದ ಫೈನಾನ್ಸ್ ಕಂಪನಿಗಳಿಂದ ಅಸಲಿ ಮಾಲೀಕರಿಗೆ ನೋಟಿಸ್‌ಗಳು ಬರುತ್ತಿದ್ದವು. ಈ ಬಗ್ಗೆ ಪ್ರಶ್ನಿಸಲು ಮುಂದಾದವರಿಗೆ ಆರೋಪಿ ಸಿಗದಂತೆ ತಲೆಮರೆಸಿಕೊಳ್ಳುತ್ತಿದ್ದ.
ಹಲವು ಠಾಣೆಗಳಲ್ಲಿ ಪ್ರಕರಣ ದಾಖಲು:
ಆರೋಪಿಯ ಈ ಕೃತ್ಯದಿಂದ ರೋಸಿಹೋಗಿದ್ದ ಸಂತ್ರಸ್ತ ಮಾಲೀಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಈತ ಕೇವಲ ಒಂದೇ ಠಾಣೆಯ ವ್ಯಾಪ್ತಿಯಲ್ಲದೆ, ವಿಲ್ಸನ್ ಗಾರ್ಡನ್, ಸುಬ್ರಹ್ಮಣ್ಯಪುರ ಹಾಗೂ ಆಡುಗೋಡಿ ಪೊಲೀಸ್ ಠಾಣೆಗಳಲ್ಲೂ ಇಂತಹದ್ದೇ ವಂಚನೆ ಪ್ರಕರಣಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.
ದೂರು ದಾಖಲಾದ ತಕ್ಷಣವೇ ಕಾರ್ಯಾಚರಣೆಕ್ಕಿಳಿದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಇನ್ನುಳಿದ ಆರರಿಂದ ಏಳು ಜನ ಸಹಚರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆಯು ಇನ್ನಷ್ಟು ತೀವ್ರಗೊಂಡಿದ್ದು, ಮತ್ತಷ್ಟು ಅಕ್ರಮಗಳು ಹೊರಬರುವ ಸಾಧ್ಯತೆಯಿದೆ.




