ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು (ಜೂನ್ 16, ಮಂಗಳವಾರ) ಮುಂಜಾನೆಯೇ ದಾವಣಗೆರೆ ನಗರದ ಮೂರು ಪ್ರಮುಖ ಬಡಾವಣೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿವೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಈ ಬೃಹತ್ ಕಾರ್ಯಾಚರಣೆಯನ್ನು ಕೈಗೊಂಡಿದೆ. ನಗರದ ಎಸ್.ಎಸ್. ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ ಹಾಗೂ ಆಂಜನೇಯ ಬಡಾವಣೆಗಳಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಪ್ರಮುಖ ಭ್ರಷ್ಟ ಅಧಿಕಾರಿಗಳು:
ಸಿದ್ದೇಶ್ವರ ಹೆಬ್ಬಾಳ್ (ಅಧಿಕಾರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ)ಛ
ದಾಳಿ ನಡೆದ ಸ್ಥಳ: ದಾವಣಗೆರೆಯ ಆಂಜನೇಯ ಬಡಾವಣೆಯ 7ನೇ ಕ್ರಾಸ್‌ನಲ್ಲಿರುವ ಇವರ ಐಷಾರಾಮಿ ನಿವಾಸ.
ವಿವರ: ಕೇವಲ ದಾವಣಗೆರೆ ಮಾತ್ರವಲ್ಲದೆ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿಯ ಅಧಿಕೃತ ಕಚೇರಿ ಸೇರಿದಂತೆ ಇವರಿಗೆ ಸಂಬಂಧಿಸಿದ ಒಟ್ಟು 4 ಪ್ರಮುಖ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಶೋಧ ನಡೆಸುತ್ತಿದ್ದಾರೆ.
ಕೃಷ್ಣ ನಾಯ್ಕ (ಕಾರ್ಯದರ್ಶಿ, ಚಿತ್ರದುರ್ಗ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರ):
ದಾಳಿ ನಡೆದ ಸ್ಥಳ: ದಾವಣಗೆರೆಯ ಪ್ರತಿಷ್ಠಿತ ಎಸ್.ಎಸ್. ಬಡಾವಣೆಯಲ್ಲಿರುವ ಆರೋಪಿತ ಕೃಷ್ಣಾನಾಯ್ಕ್ ಇವರ ನಿವಾಸ ಮತ್ತು ಚಿತ್ರದುರ್ಗ ಇವರಿಗೆ ಸೇರಿದೆ ಪ್ರದೇಶದ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ವಿವರ: ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿಗಳಲ್ಲಿ ಇಒ (EO) ಆಗಿ ಕೆಲಸ ಮಾಡುತ್ತಿದ್ದಾಗ ಹಾಗೂ ಸದ್ಯ ಬಯಲು ಸೀಮೆ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಬಗ್ಗೆ ಇವರ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇವರ ಮನೆ ಹಾಗೂ ಚಿತ್ರದುರ್ಗದ ಕಚೇರಿ ಸೇರಿದಂತೆ ಹಲವೆಡೆ ಜಂಟಿ ಪರಿಶೀಲನೆ ನಡೆಯುತ್ತಿದೆ.
ಸಣ್ಣ ಕೆಂಚಪ್ಪ (ಅಧೀಕ್ಷಕ ಇಂಜಿನಿಯರ್, KRIDL ಬೆಳಗಾವಿ):
ದಾಳಿ ನಡೆದ ಸ್ಥಳ: ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಇವರ ಸ್ವಗೃಹ.
ವಿವರ: ಬೆಳಗಾವಿಯ ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ವಿಭಾಗದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿರುವ ಇವರ ದಾವಣಗೆರೆ ನಿವಾಸದ ಮೇಲೆಯೂ ದಾಳಿಯಾಗಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ದಾವಣಗೆರೆಯ 3 ಪ್ರಮುಖ ಬಡಾವಣೆಗಳು ಸೇರಿದಂತೆ ಹುಬ್ಬಳ್ಳಿ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳ ಮೇಲೂ ಲೋಕಾಯುಕ್ತರು ಕಣ್ಣು ನೆಟ್ಟಿದ್ದಾರೆ.
ನಸುಕಿನ ಜಾವವೇ ಭಷ್ಟ್ರ ಅಧಿಕಾರಿಗಳ ಮನೆ ಕದ ತಟ್ಟಿದ ಲೋಕಾಯುಕ್ತ ಸಶಸ್ತ್ರ ಸಿಬ್ಬಂದಿಗಳು ತೀವ್ರ ಶೋಧ ನಡೆಸಿ ಸದ್ಯಕ್ಕೆ ಚಿನ್ನಾಭರಣ, ನಗದು ಹಾಗೂ ಸ್ಥಿರಾಸ್ತಿ (ಸೈಟು, ಮನೆ) ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಭ್ರಷ್ಟರ ಆಸ್ತಿಯ ಸಂಪೂರ್ಣ ಜಾತಕ ಹೊರಬೀಳುವ ಸಾಧ್ಯತೆ ಇದ್ದು ಕಾದು ನೋಡಬೇಕಿದೆ.



