ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೂತನ ಸಚಿವ ಸಂಪುಟ ಅಸ್ಥಿತ್ವಕ್ಕೆ ಬರುತ್ತಿರುವ ಸಮಯದಲ್ಲಿ ಮಾದಿಗ ಸಮುದಾಯದ ಪ್ರಮುಖ ನಾಯಕರು ಹಿರಿಯ ರಾಜಕೀಯ ಮುತ್ಸದ್ದಿ ಅನುಭವಿ ರಾಜಕಾರಣಿ ಕೆ.ಎಚ್.ಮುನಿಯಪ್ಪಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಉನ್ನತ ಖಾತೆಯನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಶೋಷಿತರ ಪರವಾದ ನಿಲುವು ತೆಗೆದುಕೊಳ್ಳಬೇಕೆಂದು ಮಾದರ ಮಹಾಸಭಾದ ರಾಜ್ಯ ಸಮಿತಿಯ ವಿಶೇಷ ಅಹ್ವಾನಿತರಾದ ರಾಮಕೃಷ್ಣ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ವೀರಪ್ಪಮೊಯ್ಲಿ, ಬಂಗಾರಪ್ಪ, ಧರ್ಮಸಿಂಗ್ ರವರ ಸಮುದಾಯದ ಜನಸಂಖ್ಯೆ ಎಸ್ಟಿತ್ತು ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ.ಸಣ್ಣಪುಟ್ಟ ಸಮುದಾಯಗಳಿಗೆ ಅಧಿಕಾರ ಸಿಕ್ಕಿರುವುದು ಸಂತೋಷದ ವಿಚಾರ. ಇದರಿಂದ ನಮಗೆ ಬೇಸರ ಇಲ್ಲ. ಆದರೆ 60 ರಿಂದ 70 ಲಕ್ಷ ಜನಸಂಖ್ಯೆ ಇರುವ ಮಾದಿಗ ಸಮುದಾಯಕ್ಕೆಮುಖ್ಯಮಂತ್ರಿ ಸ್ಥಾನ ಸಿಗದೆ ಹೋದರೂ ಅಡ್ಡಿಯಿಲ್ಲ ಕೊನೆಯ ಪಕ್ಷ ಡಿಸಿಎಂ ಸ್ಥಾನ ದಕ್ಕದಿರುವುದು ಶೋಚನೀಯ. ಕೇಂದ್ರದಲ್ಲಿ ಎರಡು ಬಾರಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪರವರಿಗೆ ಡಿಸಿಎಂ ಸ್ಥಾನ ನೀಡುವುದರ ಜೊತೆಗೆ ಉನ್ನತ ಖಾತೆಯನ್ನ ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸ ಬೇಕು, ಇಲ್ಲದಿದ್ದಾರೆ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಬಗ್ಗೆ ಮಾದಿಗ ಸಮುದಾಯ ಯೋಚಿಸ ಬೇಕಾಗುತ್ತದೆ ಎಂದು ಎಚ್ಚರಿಕೆಯನ್ನ ನೀಡಿದರು.
ಬೆಂಗಳೂರು ಗ್ರಾಮಾಂತರ ಕರ್ನಾಟಕ ಮಾದರ ಮಹಾಸಭಾದ ಕಾರ್ಯದರ್ಶಿಗಳಾದ ಬಚ್ಚಹಳ್ಳಿ ನಾಗರಾಜು ಮಾತನಾಡಿ, ರಾಜ್ಯದ ಅತಿ ದೊಡ್ಡ ಸಮುದಾಯವಾದ ಮಾದಿಗ ಸಮಾಜಕ್ಕೆ ಸಚಿವ ಸಂಪುಟದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಕೆ. ಹೆಚ್. ಮುನಿಯಪ್ಪರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಹಾಗೂ ಹೆಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಸದಸ್ಯರು ಮತ್ತು ಎಲ್.ಹನುಮಂತಯ್ಯರನ್ನ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಸಮಿತಿ ಸದಸ್ಯರಾದ ಪುರುಷೋತ್ತಮ್ ಮಾತನಾಡಿ, ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮುದಾಯವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಿದೆ.ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿಯಾಗಿದೆ. ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು ನಮ್ಮ ಮಾದಿಗ ಸಮುದಾಯದ ನಾಯಕರಾದ ಕೆ.ಎಚ್.ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಸ್ಥಾನಮಾನದ ಕೊರತೆ ನೀಗಿಸಬೇಕು ಎಂದು ಹೇಳಿದರು.
ಮಾದರ ಮಹಾಸಭಾ ತಾಲ್ಲೂಕು ಅಧ್ಯಕ್ಷ ತಳಗವಾರ ನಾಗರಾಜ್ ಮಾತನಾಡಿ, ಕೆ.ಎಚ್.ಮುನಿಯಪ್ಪರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಮಾಡಿದ್ದಾರೆ, ಅವರ ಪಕ್ಷನಿಷ್ಠಗೆ ಗೌರವ ಕೊಟ್ಟು ಡಿಸಿಎಂ ಸ್ಥಾನ ನೀಡುವಂತೆ ಮಾದರ ಮಹಾಸಭಾ ಆಗ್ರಹಿಸುತ್ತದೆ ಎಂದರು.ರಾಜ್ಯದ ಎಲ್ಲಾ ಮಾದಿಗ ಸಂಘಟನೆಗಳು, ಮಠಾಧೀಶರು, ಬುದ್ದಿಜೀವಿಗಳು, ಯುವ ಸಂಘಟನೆಗಳು, ನಿವೃತ್ತ ಅಧಿಕಾರಿಗಳು ಹಾಗೂ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಯಲ್ಲಿ ನಿಂತು ಈ ನ್ಯಾಯಯುತ ಪ್ರಾತಿನಿಧ್ಯದ ಬೇಡಿಕೆಗೆ ಬೆಂಬಲ ನೀಡಬೇಕೆಂದು ಮುಖಂಡರು ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಅಪಕಾರನಹಳ್ಳಿ ಹನುಮಯ್ಯ, ತೂಬಗೆರೆ ವೆಂಕಟೇಶ್, ವೆಂಕಟೇಶ್ ದೊಡ್ಡತುಮಕೂರು, ಗಂಗರಾಜು, ವೆಂಕಟೇಶ್ ಸಂಜಯನಗರ, ಕೆ.ವಿ.ಮುನಿಯಪ್ಪ ಕಾಡಲಪನಹಳ್ಳಿ, ಲಕ್ಕಪ್ಪ ಕಾಡನೂರು, ಆರ್.ವಿ.ಶಿವಕುಮಾರ್, ಶ್ರೀರಾಮ್ ಮಲ್ಲೋಹಳ್ಳಿ, ಕಲ್ಲುಕೋಟೆ ನಾಗರಾಜು, ಚಿಕ್ಕನರಸಪ್ಪ, ಕುರುವಿಗೆರೆ ಮುನಿರಾಜು, ಟಿ.ಡಿ ಮುನಿಯಪ್ಪ, ಮುತ್ತೂರು ಮೂರ್ತಿ, ಸೂಲುಕುಂಟೆ ಮುತ್ತರಾಜು,ಚಿಕ್ಕನರಸಪ್ಪ,ಕುಂಬರಪೇಟೆ ನಾರಾಯಣಪ್ಪ, ಪುಷ್ಪಲತಾ ವೆಂಕಟೇಶ್, ರಾಮಮೂರ್ತಿ ವರದನಹಳ್ಳಿ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.



