ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಣ ಗಳಿಸುವುದು ಆಸ್ಪತ್ರೆಯ ಉದ್ದೇಶವಾಗಬಾರದು. ಬಡ ರೋಗಿಗಳಿಗೆ ಕಾಯಿಲೆ ವಾಸಿ ಮಾಡಬೇಕೆಂದು ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಯುವರಾಜ್ ತಿಳಿಸಿದರು.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಬೋಧನಾ ಆಸ್ಪತ್ರೆ, ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಇಮ್ಮಡಿ ಸಿದ್ದರಾಮೇಶ್ವರ ವಸತಿ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಉಚಿತ ಹೃದಯ ರೋಗ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದಲ್ಲಿ ಇನ್ನು ಎರಡು ಮೂರು ಮೆಡಿಕಲ್ ಕಾಲೇಜುಗಳು ಆರಂಭವಾಗಬೇಕು. ಅಷ್ಟೊಂದು ಸಂಖ್ಯೆಯ ರೋಗಿಗಳಿದ್ದಾರೆ. ದಿನವೂ ಬೆಳಿಗ್ಗೆ ಎದ್ದ ಕೂಡಲೆ ಅರ್ಧ ಇಲ್ಲವೇ ಒಂದು ಲೀಟರ್ ನೀರು ಕುಡಿಯಬೇಕು. ಆದಷ್ಟು ಮೆದು ಆಹಾರ, ಹಣ್ಣುಗಳನ್ನು ತೆಗೆದುಕೊಳ್ಳಬೇಕು. ಚಹ, ಕಾಫಿ ಸೇವನೆ ಜಾಸ್ತಿಯಾಗಬಾರದು. ಪೌಷ್ಠಿಕ ಆಹಾರ ಸೇವಿಸಿದ ಮೇಲೆ ಪಚನವಾಗಲು ಎರಡು ಗಂಟೆಗಳ ಸಮಯ ಬೇಕು. ಅನೇಮಿಯಾ ಜಾಸ್ತಿಯಾಗುತ್ತಿದೆ. ರಾತ್ರಿ ಹೆಚ್ಚು ಊಟ ಮಾಡಿ ಮಲಗಿದರೆ ಹೃದಯಾಘಾತವಾಗುವ ಸಂಭವಗಳಿರುತ್ತವೆ. ಹಣ ಇಲ್ಲದಿದ್ದರೆ ಮಾನಸಿಕವಾಗಿ ಕುಗ್ಗುತ್ತೀರ. ಇರುವಷ್ಟು ದಿನ ಖುಷಿಯಿಂದ ಇರಿ. ಬೇರೆಯವರ ಬಗ್ಗೆ ಮಾತನಾಡಿದರೆ ವಿನಃ ಕಾಲ ಹರಣವಾಗುತ್ತದೆ. ಚಿಂತೆಯಿಂದ ದೂರವಿರಿ ಎಂದು ಜನಸಾಮಾನ್ಯರಲ್ಲಿ ಮನವಿ ಮಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ದಿನನಿತ್ಯವೂ ಸೇವಿಸುವ ಆಹಾರ ವಿಷಕಾರಿಯಾಗಿರುವುದರಿಂದ ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಯಿಲೆ ಬಂದ ಮೇಲೆ ವೈದ್ಯರ ಬಳಿ ಹೋಗುವ ಬದಲು ಬರದಂತೆ ಎಚ್ಚರಿಕೆ ವಹಿಸಿ. ಒತ್ತಡದಿಂದ ಬಿಪಿ. ಸಕ್ಕರೆ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್ ಎಲ್ಲೆಡೆ ಹರಡುತ್ತಿದೆ. ಉಚಿತ ಆರೋಗ್ಯ ತಪಾಸಣೆ ಸೇವೆಯಿದ್ದಂತೆ ಬಡ ರೋಗಿಗಳು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ದುಬಾರಿಯಾಗುತ್ತದೆ. ಹಾಗಾಗಿ ಇಂತಹ ಶಿಬಿರಗಳ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳುವಂತೆ ವಿನಂತಿಸಿದರು.
ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ಡಾ. ರಾಕೇಶ್ ಮಾತನಾಡುತ್ತ ಹೃದಯಾಘಾತವಾದರೆ ಭಯ, ದುಗುಡ ಪಡುವುದು ಬೇಡ. ಹೃದಯ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷೆ ವಹಿಸುವ ಬದಲು ತಕ್ಷಣವೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇ.ಸಿ.ಜಿ. ಆಂಜಿಯೋಗ್ರಾಮ್, ಎಕೋ ಹೀಗೆ ಅನೇಕ ರೀತಿಯ ತಪಾಸಣೆ ನಡೆಸಿದಾಗ ಹೃದಯದ ತೊಂದರೆಯಿದ್ದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಡಾ.ಸತೀಶ್ ಮಾತನಾಡಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್ ಅತಿ ಜಾಸ್ತಿಯಾಗುತ್ತಿದೆ. ದೇಶದಲ್ಲಿ ಹತ್ತು ಕೋಟಿ ಜನ ಶುಗರ್‌ನಿಂದ ಬಳಲುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೂ ಅನೇಕ ಬಗೆಯ ಸೌಲಭ್ಯಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಮಾತ್ರೆಗಳಲ್ಲಿ ಪವರ್ ಕಡಿಮೆಯಿರುತ್ತದೆನ್ನುವ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಉಚಿತವಾಗಿ ಸಿಗುವ ಮಾತ್ರೆಗಳನ್ನು ಸೇವಿಸಿ ಎಂದು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಗುರುಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹಿಂದಿನ ಕಾಲದ ಜನ ಕಷ್ಟಪಟ್ಟು ದುಡಿಯುತ್ತಿದ್ದರು. ಈಗಿನ ಆಧುನಿಕ ಯುಗದಲ್ಲಿ ಪರಿಶ್ರಮವಿಲ್ಲದಂತಾಗಿರುವುದರಿಂದ ಎಲ್ಲರೂ ಒಂದಲ್ಲ ಒಂದು ಬಗೆಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಿ ಎಂದರು.
ಸ್ಕೌಟ್ ಆಯುಕ್ತ ಪಿ.ವೈ.ದೇವರಾಜ್‌ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ರಾಜ್ಯ ಪರಿಷತ್ ಸದಸ್ಯ ಬಸವರಾಜ್, ಉಪಾಧ್ಯಕ್ಷ ಪರಮೇಶ್ ಇವರುಗಳು ವೇದಿಕೆಯಲ್ಲಿದ್ದರು.




