ಚಂದ್ರವಳ್ಳಿ ನ್ಯೂಸ್, ರಾಮನಗರ:
ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಲೋಪದೋಷಗಳು ಎಸಗಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಚುನಾವಣಾ ಆಯೋಗದ ಗಮನ ಸೆಳೆದಿರುವ ಅವರು, ರಾಮನಗರ ಕ್ಷೇತ್ರದ ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನೆ ಪರಿಶೀಲನೆ ಉದ್ದೇಶವೇ ಬುಡಮೇಲು:
ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಗಣತಿ ನಮೂನೆಗಳನ್ನು ವಿತರಿಸಬೇಕಾಗಿದೆ. ಆದರೆ, ರಾಮನಗರದಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳುವ ಬದಲಿಗೆ, ಸಮುದಾಯ ಭವನದಲ್ಲೇ ಕುಳಿತು ನಮೂನೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ನಡೆ ಆಯೋಗದ ಮನೆ ಮನೆ ಪರಿಶೀಲನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗಳ ನೇರ ಮೇಲ್ವಿಚಾರಣೆಗೆ ವಿನಂತಿ:
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ. ಹೀಗಾಗಿ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ರಾಮನಗರ ಕ್ಷೇತ್ರದ ಈ ಇಡೀ ಪ್ರಕ್ರಿಯೆಯ ನೇರ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳಬೇಕು ಎಂದು ಅವರು ಟ್ವೀಟ್ ಮೂಲಕ ವಿನಂತಿಸಿದ್ದಾರೆ.

ಕ್ಷೇತ್ರದಲ್ಲಿ ಪಾರದರ್ಶಕ ಮತದಾರರ ಪಟ್ಟಿ ಸಿದ್ಧವಾಗಬೇಕಾದರೆ ಇಂತಹ ಲೋಪಗಳನ್ನು ತಕ್ಷಣವೇ ಸರಿಪಡಿಸಬೇಕು ಎಂಬುದು ಅವರ ಆಗ್ರಹವಾಗಿದೆ.



