ಚಂದ್ರವಳ್ಳಿ ನ್ಯೂಸ್, ಹಗರಿಬೊಮ್ಮನಹಳ್ಳಿ:
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 14,06,000 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದ ಪಿರ್ಯಾದಿದಾರ ಟಿ.ಎಂ. ಚೆನ್ನಬಸಯ್ಯ, ಎಫ್ ಡಿಎ ಉದ್ಯೋಗಿ, ಚಿರಸ್ಥಹಳ್ಳಿ ಗ್ರಾಮ ನಿವಾಸಿ ಇವರ ಮನೆಯ ಬಾಗಿಲು ಮುರಿದು ಸುಮಾರು 92,000 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಂಜುನಾಥ ರವರ ನಿರ್ದೇಶನದಂತೆ, ಕೂಡ್ಲಿಗಿ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ಪೊಲೀಸ್ ವೃತ್ತ ನಿರೀಕ್ಷಕ ವಿಕಾಸ್ ಪಿ. ಲಮಾಣಿ, ಪಿಎಸ್ಐ ಉಮಾಪತಿ ಬಿ., ಪಿಎಸ್ಐ ತಾರಾಬಾಯಿ, ಪಿಎಸ್ಐ ನಾಗರಾಜ ಕೊಟಗಿ ಸೇರಿದಂತೆ ಸಿಬ್ಬಂದಿಗಳಾದ ಕಿರಣ್ ಕುಮಾರ್, ರಾಮಾಂಜಿನೇಯ, ಹೆಗ್ಗಪ್ಪ, ಮಹೇಶ್ ಎಂ., ದೊಡ್ಡ ಬಸಪ್ಪ ಹಾಗೂ ಸುರೇಶ್ ಕುಮಾರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಿಶೇಷ ತಂಡವು ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿತರನ್ನು ಬಂಧಿಸಿದೆ. ಬಂಧಿತರಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 96.54 ಗ್ರಾಂ ತೂಕದ 12,56,000 ಮೌಲ್ಯದ ಚಿನ್ನದ ಆಭರಣಗಳು ಹಾಗೂ 750 ಗ್ರಾಂ ತೂಕದ 1,50,000 ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಗದ್ದಿಕೇರಿ ನಿವಾಸಿ ಕುಮಾರನಹಳ್ಳಿ ಆನಂದ (24), ಅರಳೇಹಳ್ಳಿ ನಿವಾಸಿ ಜಹಾಂಗೀರ್ ಭಾಷಾ(36) ಎಂದು ಗುರುತಿಸಲಾಗಿದೆ.
ಜಹಾಂಗೀರ್ ಭಾಷಾ ವಿರುದ್ಧ ಈ ಹಿಂದೆಯೂ ಬೈಕ್ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಪ್ರಶಂಸಿಸಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.



