ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮಧುರನಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಕೆ. ಚೆಂಗಪ್ಪ ಅವರನ್ನು ಗ್ರಾಮಸ್ಥರು, ಶಿಷ್ಯರು ಹಾಗೂ ಶಾಲಾ ಸಮುದಾಯದವರು ಸನ್ಮಾನಿಸಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೆಂಗಪ್ಪ, “ಕಡುಬಡತನದಿಂದ ಬೆಳೆದು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿ ಶಿಕ್ಷಕನಾದೆ. ಅಣ್ಣನ ದುಡಿಮೆಯ ಹಣದಿಂದ ಟಿಸಿಎಚ್ ಓದಿ ಶಿಕ್ಷಕ ವೃತ್ತಿಗೆ ಸೇರಿದೆ. ಮಧುರನಹೊಸಹಳ್ಳಿಯ ಜನರು 23 ವರ್ಷಗಳ ಕಾಲ ಯಾವುದೇ ತೊಂದರೆಯಾಗದಂತೆ ಬೆಂಬಲಿಸಿ ಸೇವೆ ಸಲ್ಲಿಸಲು ಅವಕಾಶ ನೀಡಿದರು. ಈ ಊರಿನ ಜನರ ಪ್ರೀತಿಗೆ ಸದಾ ಆಭಾರಿಯಾಗಿರುತ್ತೇನೆ” ಎಂದರು.
“ಮಕ್ಕಳಿಗೆ ವಿದ್ಯೆಯ ಜತೆಗೆ ಮೌಲ್ಯ, ಸಂಸ್ಕಾರ ಮತ್ತು ಉತ್ತಮ ನಡವಳಿಕೆಯನ್ನು ಕಲಿಸುವುದು ನನ್ನ ಆದ್ಯತೆಯಾಗಿತ್ತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಬೇಕು” ಎಂದು ಹೇಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಗ್ರಾಮಸ್ಥ ಕೆಂಪೇಗೌಡ ಮಾತನಾಡಿ, ಚೆಂಗಪ್ಪ ಅವರು ಹಲವು ವಿದ್ಯಾರ್ಥಿಗಳಿಗೆ ಜ್ಞಾನ, ನೈತಿಕ ಮೌಲ್ಯ ಹಾಗೂ ಉತ್ತಮ ಮಾರ್ಗದರ್ಶನ ನೀಡಿ ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಕೆ. ಮಾತನಾಡಿ, ತಾನೂ ಅವರ ಶಿಷ್ಯೆಯಾಗಿದ್ದು, ಅವರಂತಹ ಮೌಲ್ಯಯುತ ಶಿಕ್ಷಕರು ಅಪರೂಪ ಎಂದು ಸ್ಮರಿಸಿದರು.




