ಚಂದ್ರವಳ್ಳಿ ನ್ಯೂಸ್, ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಬಳಿಯ ಅಖ್ರಾನ್ನಲ್ಲಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಭದ್ರತಾ ತಪಾಸಣಾ ಕೇಂದ್ರದ ಮೇಲೆ ಬುಧವಾರ ಮಧ್ಯಾಹ್ನ ಸುಮಾರು 2:15ಕ್ಕೆ ಮೋಟಾರ್ಸೈಕಲ್ನಲ್ಲಿ ಬಂದ ಅಪರಿಚಿತ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದು, ಅವರನ್ನು ಕೂಡಲೇ ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿ ನಡೆದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕುಲ್ಗಾಮ್ನಲ್ಲೇ ಇದ್ದರಾದರೂ, ಘಟನಾ ಸ್ಥಳದಿಂದ ಬಹಳ ದೂರದಲ್ಲಿದ್ದರು. ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು, ಹೆಚ್ಚುವರಿ ಬ್ಯಾರಿಕೇಡ್ ಹಾಗೂ ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಧ್ವನಿವರ್ಧಕಗಳ ಮೂಲಕ ಸ್ಥಳೀಯರಿಗೆ ಮನೆಯೊಳಗೇ ಇರುವಂತೆ ಸೂಚಿಸಲಾಗಿದ್ದು, ಪರಾರಿಯಾಗಿರುವ ದಾಳಿಕೋರರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ (ಕಾರ್ಡನ್ ಆಪರೇಷನ್) ಆರಂಭಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.




