ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ರಸ್ತೆಯೊಂದರಲ್ಲಿರುವ ಒಟ್ಟು 222 ಬೀದಿ ದೀಪಗಳ ಪೈಕಿ 140 ದೀಪಗಳು ಉರಿಯದೆ ಸ್ಥಗಿತಗೊಂಡಿರುವುದಕ್ಕೆ ಕಂದಾಯ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, "ಇದು ಹಣಕಾಸಿನ ಅಭಾವ ಅಥವಾ ಯೋಜನೆಗಳ ಕೊರತೆಯಿಂದ ಆಗಿರುವ ಸಮಸ್ಯೆಯಲ್ಲ, ಬದಲಾಗಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವದ ಸ್ಪಷ್ಟ ಉದಾಹರಣೆಯಾಗಿದೆ" ಎಂದು ವೀಡಂಬಿಸಿದ್ದಾರೆ.
ಸಾರ್ವಜನಿಕರಿಗೆ ಕನಿಷ್ಠ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಆಡಳಿತದ ಕರ್ತವ್ಯ. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಹಾಗೂ ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಾಕ್ಷಿಣ್ಯವಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.




