ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಈ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ದಿಢೀರ್‌ಬೆಳವಣಿಗೆಗಳು ನಡೆದಿವೆ.
ಪ್ರಕರಣದ ಗಂಭೀರತೆ ಪರಿಗಣಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಧ್ಯಪ್ರವೇಶಿಸಿದ್ದು, ಸಾಲು ಸಾಲು ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರು ಸಚಿವರಾಗಿ ಮುಂದುವರಿಯುವ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ದಿಢೀರ್ ದೆಹಲಿ ತಲುಪಿದ ಸಚಿವ ನಾಗೇಂದ್ರ: ರಾಜ್ಯಪಾಲರ ಪತ್ರ ಹಾಗೂ ವಿಪಕ್ಷಗಳ ತೀವ್ರ ತರಾಟೆಯ ನಡುವೆಯೇ ಸಚಿವ ಬಿ. ನಾಗೇಂದ್ರ ಬುಧವಾರ ರಾತ್ರಿ ದಿಢೀರನೇ ದೆಹಲಿಗೆ ತೆರಳಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಅವರು, ಹೈಕಮಾಂಡ್ ಸೂಚನೆ ನೀಡಿದರೆ ತಾವು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂಬ ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್‌ಭೇಟಿ, ಸಚಿವರ ರಾಜೀನಾಮೆ ಕೌಂಟ್‌ಡೌನ್?:
ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳು, ಪ್ರತಿಪಕ್ಷಗಳ ಅಹೋರಾತ್ರಿ ಧರಣಿ ಹಾಗೂ ಕಾನೂನಾತ್ಮಕ ತೊಡಕುಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರೊಂದಿಗೆ ನಾಗೇಂದ್ರ ಚರ್ಚಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡಲಿದ್ದಾರೆ.
ಸಚಿವರ ಈ ದೆಹಲಿ ಭೇಟಿಯು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಹೈಕಮಾಂಡ್‌ಭೇಟಿಯ ನಂತರ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಚರ್ಚೆಗಳು ಜೋರಾಗಿವೆ.




