ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಕ್ಷೇತ್ರವಾದ ಬಿಟಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಮೆಟ್ರೋ ನಿಲ್ದಾಣಗಳಿಗೆ ಸ್ಥಳೀಯ ಪ್ರದೇಶದ ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಮರುನಾಮಕರಣ ಮಾಡುವಂತೆ ಕೋರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಕೆಲವು ಮೆಟ್ರೋ ನಿಲ್ದಾಣಗಳ ಹೆಸರುಗಳು ಅವು ಇರುವ ನಿಖರ ಸ್ಥಳ ಅಥವಾ ಆ ಪ್ರದೇಶದ ಜನರಿಗೆ ಹೆಚ್ಚು ಪರಿಚಿತವಾಗಿರುವ ಸ್ಥಳೀಯ ಹೆಸರನ್ನು ಬಿಂಬಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ನಿಲ್ದಾಣದ ಸ್ಥಳವನ್ನು ಗುರುತಿಸುವಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಪ್ರಸ್ತಾವನೆಗಳು ಮತ್ತು ಹೊಸ ಹೆಸರುಗಳ ವಿವರ:
ನಿಲ್ದಾಣಗಳ ಹೆಸರುಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಪ್ರದೇಶದ ಪ್ರಚಲಿತ ಹೆಸರು, ಸಾಂಸ್ಕೃತಿಕ ಮಹತ್ವ ಹಾಗೂ ಪ್ರಯಾಣಿಕರಿಗೆ ಸುಲಭವಾಗಿ ಗುರುತಿಸಲು ಅನುಕೂಲವಾಗುವ ಅಂಶಗಳನ್ನು ಪರಿಗಣಿಸಲು ಅವರು ಸಲಹೆ ನೀಡಿದ್ದಾರೆ. ಅದರಂತೆ ಈ ಕೆಳಗಿನಂತೆ ಬದಲಾಯಿಸಲು ಕೋರಿದ್ದಾರೆ.
ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣವನ್ನು ಎನ್.ಎಸ್. ಪಾಳ್ಯ ಮೆಟ್ರೋ ನಿಲ್ದಾಣ ಎಂದು ಬದಲಾಯಿಸುವುದು.
ತಾವರೆಕೆರೆ ಮೆಟ್ರೋ ನಿಲ್ದಾಣವನ್ನು ಎಸ್.ಜಿ.ಪಾಳ್ಯ ಮೆಟ್ರೋ ನಿಲ್ದಾಣ ಎಂದು ಮರುನಾಮಕರಣ ಮಾಡುವುದು.
ಡೈರಿ ವೃತ್ತ ಮೆಟ್ರೋ ನಿಲ್ದಾಣದ ಹೆಸರನ್ನು ಲಕ್ಕಸಂದ್ರ ಮೆಟ್ರೋ ನಿಲ್ದಾಣವೆಂದು ಬದಲಾಯಿಸುವುದು.
ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯವನ್ನು ಪಡೆದು, ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಈ ಮೆಟ್ರೋ ನಿಲ್ದಾಣಗಳ ಮರುನಾಮಕರಣ ಕುರಿತು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಬಿಎಂಆರ್ಸಿಎಲ್ ಎಂಡಿ ಅವರನ್ನು ಕೋರಿದ್ದಾರೆ.




