ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 2,372 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಲು ಸಂಚು ರೂಪಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಸೈಯದ್ ಖುದ್ದುಸ್ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ಇತ್ತೀಚೆಗೆ ಕೆಲವು ವ್ಯಕ್ತಿಗಳು ಫಾರ್ಮ್-7 (Form 7) ಬಳಸಿ ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಈ ಕೃತ್ಯದ ಹಿಂದೆ ಇರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಕೆ. ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ ಮತ್ತು ಸಂಪತ್ ಕುಮಾರ್, ನಗರಸಭೆ ಸದಸ್ಯರಾದ ಶಬ್ಬೀರ್ ಭಾಷಾ, ಸುದರ್ಶನ್ ಹಾಗೂ ಪ್ರಮುಖರಾದ ನವಾಜ್, ಜಮೀರ್, ಉಸ್ಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




