ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಶಾಲೆಗೆ ತೆರಳಿದ್ದ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿ, ಕೊನೆಗೆ ಚನ್ನಗಿರಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ವರದಿಯಾಗಿದೆ. ಆದರೆ ಈ ಘಟನೆಯ ಹಿಂದೆ ಶಾಲೆಗಳಲ್ಲಿ ನಡೆಯುತ್ತಿರುವ ರಾಗಿಂಗ್ ಹಾಗೂ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ವಿವರ: ದಾವಣಗೆರೆಯ ಪ್ರತಿಷ್ಠಿತ ಪುಷ್ಪಾ ಮಹಲಿಂಗಪ್ಪ ಶಾಲೆಯ 9ನೇ ತರಗತಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದನು. ಮಗ ನಾಪತ್ತೆಯಾದ ವಿಷಯ ತಿಳಿದು ಆತಂಕಕ್ಕೊಳಗಾದ ಪೋಷಕರು ಶಾಲೆಯ ಬಳಿ ಕಣ್ಣೀರುಹಾಕಿ ಆತಂಕ ವ್ಯಕ್ತಪಡಿಸಿದ್ದರು. ತದನಂತರ ಚನ್ನಗಿರಿಯಲ್ಲಿ ಬಸ್ ಏಜೆಂಟರೊಬ್ಬರ ಮೊಬೈಲ್‌ನಿಂದ ತನ್ನ ತಾಯಿಗೆ ಕರೆ ಮಾಡಿದ ದಿಗಂತ್, ತಾನು ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪೋಷಕರ ಗಂಭೀರ ಆರೋಪ: ದಿಗಂತ್ ನಾಪತ್ತೆಗೆ ಶಾಲೆಯೊಳಗೆ ನಡೆಯುತ್ತಿರುವ ರಾಗಿಂಗ್ ಹಾಗೂ ಸಹಪಾಠಿಗಳ ನಿರಂತರ ಕಿರುಕುಳವೇ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆ ದಿಗಂತ್ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ವೇಳೆ ಆತನ ಬಾಯಿ ಹಾಗೂ ಮೂಗಿನಿಂದ ರಕ್ತ ಬಂದಿತ್ತೆಂದು ದೂರುದಾರರು ತಿಳಿಸಿದ್ದಾರೆ. ಇಂತಹ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಶಾಲೆಯಿಂದ ಹೊರಟು ಹೋಗಿರುವುದಾಗಿ ತಿಳಿದುಬಂದಿದೆ.
ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳ ಕ್ರಮ: ಪುಷ್ಪಾ ಮಹಲಿಂಗಪ್ಪ ಶಾಲೆಯಲ್ಲಿ ಇಂತಹ ಪ್ರಕರಣ ಮರುಕಳಿಸುತ್ತಿರುವುದು ಇದು ಎರಡನೆಯದ್ದಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ವಸತಿ ಶಾಲೆಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಜಿಲ್ಲಾಧಿಕಾರಿಗಳು, ಅಂತಹ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲು ಚಿಂತನೆ ನಡೆಸಿದ್ದಾರೆ.




