ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೊಂದಿರುವ ವೈಯಕ್ತಿಕ ದ್ವೇಷವು ಈಗ ರಾಷ್ಟ್ರ ದ್ವೇಷವಾಗಿ ಪರಿಣಮಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರವಾಗಿ ಟೀಕಿಸಿದ್ದಾರೆ.
ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರು ನೀಡುತ್ತಿರುವ ಕರೆಗಳಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಸರಣಿ ಉದಾಹರಣೆಗಳನ್ನು ನೀಡಿರುವ ಅವರು, ಕಾಂಗ್ರೆಸ್‌ನ ಇತಿಹಾಸ ಮತ್ತು ಇಂದಿನ ನಡವಳಿಕೆಯನ್ನು ಹೋಲಿಕೆ ಮಾಡಿದ್ದಾರೆ.
ಇಂದಿರಾ ಗಾಂಧಿ ಕರೆ 'ದೇಶಪ್ರೇಮ', ಮೋದಿ ಕರೆ 'ದ್ವೇಷ'ವೇ?:
ಸಿ.ಟಿ. ರವಿ ಅವರು ಕಾಂಗ್ರೆಸ್‌ನ ಇಂದಿನ ನಿಲುವನ್ನು ಪ್ರಶ್ನಿಸುತ್ತಾ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಇತಿಹಾಸದ ನೆನಪು: ಅಂದು ಯುದ್ಧದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಇಂಧನ ಮತ್ತು ಚಿನ್ನದ ಖರೀದಿಯನ್ನು ಕಡಿಮೆ ಮಾಡಿ ಎಂದು ಕರೆ ನೀಡಿದ್ದರು. ಅಂದು ಅದು ಕಾಂಗ್ರೆಸಿಗರಿಗೆ ದೇಶಕ್ಕಾಗಿ ನೀಡಿದ ಮಹತ್ವದ ಕರೆ ಎನಿಸಿತ್ತು.
ಮೋದಿ ವಿರುದ್ಧ ಅಸಮಾಧಾನ ಏಕೆ?: ಇಂದು ಜಾಗತಿಕ ಸಂಕಷ್ಟದ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ರಕ್ಷಿಸಲು *'ಸಪ್ತ ಸೂತ್ರ'*ಗಳನ್ನು ಮುಂದಿಟ್ಟರೆ, ಕಾಂಗ್ರೆಸ್ ನಾಯಕರಿಗೆ ಅದರಿಂದ ಹೊಟ್ಟೆ ಉರಿ ಶುರುವಾಗಿದೆ.
ಪೆಟ್ರೋಲ್ ಪಂಪ್ ಮುಚ್ಚುವ ಸಲಹೆ: ಹಿಂದೆ ಇಂಧನ ಉಳಿತಾಯಕ್ಕಾಗಿ ರಾತ್ರಿ 8 ಗಂಟೆಗೇ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಬೇಕು ಎಂಬ ಸಲಹೆ ನೀಡಿದ್ದೇ ಇದೇ ಕಾಂಗ್ರೆಸ್ ಸರ್ಕಾರವಲ್ಲವೇ? ಎಂದು ಅವರು ನೆನಪಿಸಿದ್ದಾರೆ.
"ದೇಶಕ್ಕಾಗಿ ಒಂದು ಹೊತ್ತಿನ ಊಟ ಬಿಡಿ ಎಂದು ಲಾಲ್ ಬಹದ್ದೂರ್ ಶಾಸ್ತ್ರೀಜಿ ನೀಡಿದ ಕರೆಯನ್ನು ಶಿರಸಾವಹಿಸಿ ಪಾಲಿಸಿದ ಇತಿಹಾಸ ನಮ್ಮ ದೇಶಕ್ಕಿದೆ. ಇಂದು ಬಿಕ್ಕಟ್ಟು ಎದುರಿಸಲು ಮೋದಿ ಜಿ ನೀಡಿದ ಕರೆಯನ್ನೂ ದೇಶವಾಸಿಗಳು ಪಾಲಿಸಲಿದ್ದಾರೆ."
ಸಿ.ಟಿ. ರವಿ
ಕಾಂಗ್ರೆಸ್‌ನ 'ಭಾರತ ದ್ವೇಷ'ಕ್ಕೆ ತಕ್ಕ ಉತ್ತರ:
ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯ ವಿರೋಧಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ. ಪ್ರಧಾನಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ ಅವರು ಭಾರತದ ಏಳಿಗೆಯನ್ನೇ ಸಹಿಸುತ್ತಿಲ್ಲ. ಕಾಂಗ್ರೆಸಿಗರ ಇಂತಹ 'ಭಾರತ ದ್ವೇಷ'ದ ಮನಸ್ಥಿತಿಯನ್ನು ದೇಶದ ಜನತೆ ಮೆಟ್ಟಿ ನಿಲ್ಲಲಿದ್ದಾರೆ ಎಂದು ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



