ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2,500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ವರದಿಗಳು ಹೊರಬಿದ್ದಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲೇ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದಲ್ಲಿರುವ ಅನ್ನದಾತರ ಕಣ್ಣೀರು ಒರೆಸಬೇಕಾದ ರಾಜ್ಯ ಸರ್ಕಾರ ಸಂಪೂರ್ಣ ಮೌನ ವಹಿಸಿದೆ ಎಂದು ಕಿಡಿಕಾರಿರುವ ಅವರು, ಬರ ಪರಿಹಾರ ವಿತರಣೆ ಹಾಗೂ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ನಾಯಕರು ಖಾಲಿ ಆಶ್ವಾಸನೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಹೊರತು, ಕೃಷಿಕರ ನೆರವಿಗೆ ಧಾವಿಸುತ್ತಿಲ್ಲ ಎಂದು ಪ್ರಹಾರ ನಡೆಸಿದ್ದಾರೆ.
ಆದ್ಯತೆ ಎಲ್ಲಿದೆ?: ರೈತರು ಬೆಳೆ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವಾಗ ಈ ಸರ್ಕಾರದ ನೈಜ ಆದ್ಯತೆ ಏನು?
ಕ್ರಮಗಳೇನು?: ರೈತರ ಆತ್ಮಹತ್ಯೆ ಸರಣಿಯನ್ನು ತಡೆಯಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಸರ್ಕಾರ ಕೈಗೊಂಡಿರುವ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮಗಳೇನು?
"ರೈತರ ಬದುಕಿನ ಜೊತೆ ರಾಜಕೀಯ ಮಾಡುವುದನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ಬರ ಹಾಗೂ ಬೆಳೆ ಹಾನಿಯಿಂದ ಕಂಗೆಟ್ಟಿರುವ ಅನ್ನದಾತನಿಗೆ ತಕ್ಷಣವೇ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಿ, ಆತ್ಮಹತ್ಯೆ ತಡೆಯಲು ಗಂಭೀರ ಸ್ವರೂಪದ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಆರ್ ಆಶೋಕ್ ಆಗ್ರಹಿಸಿದ್ದಾರೆ.




