ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ಪಕ್ಷದ ರಾಜ್ಯ ಕಚೇರಿ 'ಜೆಪಿ ಭವನ'ದಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 500ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ನೇತೃತ್ವದಲ್ಲಿ ನಡೆದ ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮೂಡಿಗೆರೆಯ ಪ್ರಮುಖ ನಾಯಕರಾದ ವಿಜಯಕುಮಾರ್, ತುಡಕೂರು ಮಂಜುನಾಥ್, ಬೆರವಣಗೂಡು ಮಂಜುನಾಥ್ ಸೇರಿದಂತೆ ನೂರಾರು ನಾಯಕರು ಪಕ್ಷದ ಧ್ವಜ ಹಿಡಿದರು.
ಪಕ್ಷ ಸಂಘಟನೆಗೆ ಆಹ್ವಾನ: ಪಕ್ಷಕ್ಕೆ ಹೊಸದಾಗಿ ಆಗಮಿಸಿದ ಎಲ್ಲರನ್ನು ಹೆಗಲಿಗೆ ಶಾಲು ಹೊದಿಸಿ ಸ್ವಾಗತಿಸಿದ ನಿಖಿಲ್ ಕುಮಾರಸ್ವಾಮಿ, "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಲ್ಪನೆ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಶೈಲಿಗೆ ಮೆಚ್ಚಿ ಆಗಮಿಸಿರುವ ಎಲ್ಲರಿಗೂ ಧನ್ಯವಾದಗಳು. ಜೆಡಿಎಸ್ ತತ್ವ-ಸಿದ್ಧಾಂತಗಳ ಅಡಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ರೈತರ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಶ್ರಮಿಸೋಣ" ಎಂದು ಕರೆ ನೀಡಿದರು.




