ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಹಬ್ಬ ಮೈಸೂರು ದಸರಾ–2026 ಅನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ 18ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ನಾಡಿನಾದ್ಯಂತ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ಜ್ಞಾನ ದಾಸೋಹದ ಪರಂಪರೆಯೊಂದಿಗೆ 'ವೃಕ್ಷ ದಾಸೋಹ' ಹಾಗೂ ಲಕ್ಷ ವೃಕ್ಷೋತ್ಸವದಂತಹ ಸಮಾಜಮುಖಿ ಕಾರ್ಯಗಳ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ.
ಅಲ್ಲದೆ, ಗವಿಮಠದ ಜಾತ್ರೆಯನ್ನು ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ ಬಾಲ್ಯವಿವಾಹ ನಿಷೇಧ, ಅಂಗಾಂಗ ದಾನ ಹಾಗೂ ನೇತ್ರದಾನದಂತಹ ಸಾಮಾಜಿಕ ಜಾಗೃತಿ ಅಭಿಯಾನಗಳಿಗೆ ವೇದಿಕೆಯನ್ನಾಗಿ ರೂಪಿಸಿದ ಪೂಜ್ಯರ ಸಾನ್ನಿಧ್ಯದಲ್ಲಿ ಈ ಬಾರಿಯ ದಸರಾ ಉದ್ಘಾಟನೆಯಾಗುತ್ತಿರುವುದು ಇಡೀ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಬಸವಣ್ಣನವರ ಕಾಯಕ–ದಾಸೋಹದ ಸಂದೇಶವನ್ನು ಎತ್ತಿಹಿಡಿಯುತ್ತಿರುವ ಪೂಜ್ಯರ ಉಪಸ್ಥಿತಿಯಲ್ಲಿ ನಾಡಹಬ್ಬವು ಮತ್ತಷ್ಟು ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ಜರುಗಲಿದೆ. ಸಂತರು ಮತ್ತು ಸಂಸ್ಕೃತಿಯ ಈ ಅಪೂರ್ವ ಮಿಲನದಿಂದ ನಾಡಿನೆಲ್ಲೆಡೆ ಭಕ್ತಿ, ಸಡಗರದ ಹೊನಲು ಹರಿಯಲಿ ಎಂದು ಅವರು ಆಶಿಸಿದ್ದಾರೆ.




