ಚಂದ್ರವಳ್ಳಿ ನ್ಯೂಸ್, ಮೈಸೂರು:
"ದಸರಾ ಮಹೋತ್ಸವವು ತುಂಗಭದ್ರೆಯ ತೀರದಿಂದ ಕಾವೇರಿ ತೀರದವರೆಗೆ ಹರಿದುಬಂದಿದೆ. ವಿಜಯನಗರದ ಮಹಾನವಮಿ ದಿಬ್ಬದಿಂದ ಮೈಸೂರಿಗೆ ಸುಂದರ ಹಬ್ಬವಾಗಿ ಹರಿದುಬಂದಿರುವ ಈ ದಸರಾ, ಒಂದು ಕಾಲದಲ್ಲಿ ದೊರೆಗಳ ಹಬ್ಬವಾಗಿತ್ತು. ಆದರೆ ಇಂದು ಅದು ಪ್ರಜಾಸತ್ತಾತ್ಮಕವಾಗಿ 'ಧರೆಯ (ಜನರ) ಹಬ್ಬ'ವಾಗಿ ವಿಶ್ವವಿಖ್ಯಾತಿ ಪಡೆದಿದೆ" ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಬಣ್ಣಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಚಾಮುಂಡಿ ಬೆಟ್ಟದ ಸನ್ನಿಧಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮೈಸೂರಿನ ಸಾಂಸ್ಕೃತಿಕ ಹಾಗೂ ಇತಿಹಾಸದ ಹಿರಿಮೆಯನ್ನು ಕೊಂಡಾಡಿದರು.
ಮೈಸೂರು ಕರ್ನಾಟಕದ ಕಿರೀಟ: "ಮೈಸೂರು ಕರ್ನಾಟಕ ಹಾಗೂ ಭಾರತದ ಹೆಮ್ಮೆಯ ಕಿರೀಟ. ಇದು ಕನ್ನಡಿಗರೆಲ್ಲರ ಹೆಮ್ಮೆಯ ಸಾಂಸ್ಕೃತಿಕ ನಗರಿ, ಸಂಸ್ಕಾರವಂತರು ಮತ್ತು ಅರಿವುಳ್ಳ ಜನರ ನೆಲೆಯಾಗಿದೆ."
ತಾಯಿ ಚಾಮುಂಡಿ ಶಕ್ತಿಯ ಟವರ್: "ಮೈಸೂರು ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ. ನಾನು ಜೋಳಿಗೆಯ ಜಂಗಮನಷ್ಟೇ. ಹಿಂದೆ ಹಿರಿಯರು ಹಚ್ಚಿದ ಕನ್ನಡದ ದೀಪ ಆರದಿರಲಿ ಎಂದು ಕನ್ನಡಿಗರ ಪರವಾಗಿ ತಾಯಿ ಚಾಮುಂಡಿಯಲ್ಲಿ ಪ್ರಾರ್ಥಿಸಲು ಬಂದಿದ್ದೇನೆ. ತಾಯಿ ಚಾಮುಂಡಿ ಶಕ್ತಿಯ ಮಹಾನ್ ಕೇಂದ್ರ (ಟವರ್)."
ತ್ರಿಕಾಲಗಳ ಸಂಗಮ ದಸರಾ: "ಮೈಸೂರು ದಸರಾ ಎಂದರೆ ಗತವೈಭವ, ವರ್ತಮಾನದ ಉತ್ಸಾಹ ಹಾಗೂ ನಾಡಿನ ಭವಿಷ್ಯಕ್ಕೊಂದು ಸ್ಪಷ್ಟ ದಿಕ್ಸೂಚಿ. ಇದು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಸಂಗಮವಾಗಿದೆ."
ಮೈಸೂರು ರಾಜಮನೆತನದ ಕೊಡುಗೆ ಅಪ್ರತಿಮ: "ಬಸವಣ್ಣನವರು ನಮಗೆ ಕಾಯಕ ಸಂಸ್ಕೃತಿಯನ್ನು ಕಲಿಸಿದರು. ಮೈಸೂರು ರಾಜಮನೆತನ ಅದನ್ನು ಜೀವನದಲ್ಲಿ ತೋರಿಸಿಕೊಟ್ಟಿದೆ. ಮೈಸೂರು ಸಂಸ್ಥಾನದ ಕೊಡುಗೆಯನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸವನ್ನು ಊಹಿಸುವುದು ಅಸಾಧ್ಯ. ದೇಶದ ಹಲವೆಡೆ ಕತ್ತಲಿರುವಾಗ ಶಿವನಸಮುದ್ರದಲ್ಲಿ ಹೈಡ್ರೋ ಎಲೆಕ್ಟ್ರಿಕ್ ವಿದ್ಯುತ್ ತಂದವರು, ಐಐಎಸ್ಸಿಗೆ (IISc) 300 ಎಕರೆ ಭೂಮಿ ನೀಡಿದವರು, ಮೈಸೂರು ವಿಶ್ವವಿದ್ಯಾಲಯ ಹಾಗೂ ಹೆಣ್ಣುಮಕ್ಕಳಿಗೆ ಶಾಲೆಗಳನ್ನು ಆರಂಭಿಸಿದವರು ಮೈಸೂರಿನ ಮಹಾರಾಜರು. ಗಾಂಧೀಜಿಯವರು ಅವರನ್ನು 'ರಾಜರ್ಷಿ' ಎಂದು ಕರೆದರು. ಅವರು ನೆಲವನ್ನು ಆಳದೆ ಜನರ ಮನಸ್ಸನ್ನು ಆಳಿದರು."
ನಾಡಿಗಾಗಿ ಆಭರಣ ಇಟ್ಟ ತ್ಯಾಗ: "ಕೆಆರ್‌ಎಸ್ (ಕನ್ನಂಬಾಡಿ) ಅಣೆಕಟ್ಟು ಕಟ್ಟುವಾಗ ಆರ್ಥಿಕ ಮುಗ್ಗಟ್ಟು ಎದುರಾದಾಗ, ಮಹಾರಾಣಿ ಕೆಂಪಣ್ಣಂಜಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ರಾಜಮನೆತನದ ಆಭರಣಗಳನ್ನು ಒತ್ತೆಯಿಟ್ಟು ನಾಡಿನ ಹಿತಕ್ಕಾಗಿ ಅಣೆಕಟ್ಟು ನಿರ್ಮಿಸಿದರು. ಅಧಿಕಾರದಲ್ಲಿದ್ದವರು ಕೇವಲ ಆಳುವವರಲ್ಲ, ಕೆಳಗಿರುವವರ ನೋವನ್ನು ಅರಿತು ಸ್ಪಂದಿಸುವವರು ಎಂಬುದನ್ನು ಮೈಸೂರು ಸಂಸ್ಥಾನ ತೋರಿಸಿಕೊಟ್ಟಿದೆ."



