ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಹೆಮ್ಮೆಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಡಿಜಿಟಲ್ ಮಾರುಕಟ್ಟೆಯಲ್ಲಿ ಅಭೂತಪೂರ್ವ ಮೈಲಿಗಲ್ಲು ಸ್ಥಾಪಿಸಿದೆ. ಮೈಸೂರ್ ಸ್ಯಾಂಡಲ್ ಸೋಪಿನ ಜನಪ್ರಿಯತೆ ಇ-ಕಾಮರ್ಸ್ ವೇದಿಕೆಗಳಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದ್ದು, ಕ್ವಿಕ್ ಕಾಮರ್ಸ್ ವಿಭಾಗದಲ್ಲಿ ಸಂಸ್ಥೆಗೆ ಪ್ರತಿಷ್ಠಿತ 'ಝೆಪ್ಟೋ ಪೂರೈಕೆ ಸರಪಳಿ ಉತ್ಕೃಷ್ಟತಾ ಪುರಸ್ಕಾರ' ಲಭಿಸಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಎಂ.ಬಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದಿರುವ ದಿಟ್ಟ ಮಾರುಕಟ್ಟೆ ವಿಸ್ತರಣೆ ಮತ್ತು ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯೇ ಈ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
28 ಕೋಟಿಯಿಂದ 122 ಕೋಟಿಗೆ ಜಿಗಿದ ವಹಿವಾಟು!
ಕೇವಲ 3 ವರ್ಷಗಳ ಹಿಂದೆ ಕೆಎಸ್&ಡಿಎಲ್ ಸಂಸ್ಥೆಯ ಒಟ್ಟು ಇ-ಕಾಮರ್ಸ್ ವಹಿವಾಟು 28 ಕೋಟಿ ರೂಪಾಯಿಗಳಷ್ಟಿತ್ತು. ಆದರೆ, ಕಾಲಕ್ಕೆ ತಕ್ಕಂತೆ ಡಿಜಿಟಲ್ ಮಾರಾಟ ತಂತ್ರಗಳನ್ನು ಬದಲಾಯಿಸಿಕೊಂಡ ಪರಿಣಾಮವಾಗಿ, ಇಂದು ಸಂಸ್ಥೆಯ ಆನ್‌ಲೈನ್ ವಹಿವಾಟು ಬರೋಬ್ಬರಿ 122 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಝೆಪ್ಟೋದಲ್ಲಿ ತಿಂಗಳ ಮಾರಾಟ 10 ಲಕ್ಷದಿಂದ 2 ಕೋಟಿಗೆ!
ಗಮನಾರ್ಹ ಸಾಧನೆ: ಕೇವಲ ಎರಡು ವರ್ಷಗಳ ಹಿಂದೆ ‘ಝೆಪ್ಟೋ’ ಸೇರಿದಂತೆ ವಿವಿಧ ತ್ವರಿತ ವಾಣಿಜ್ಯ ವೇದಿಕೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪಿನ ಮಾಸಿಕ ಮಾರಾಟ ಕೇವಲ 10 ಲಕ್ಷ ಇತ್ತು. ಆದರೆ ಇಂದು ಅದು ತಿಂಗಳಿಗೆ ದಾಖಲೆಯ 2 ಕೋಟಿ ರೂಪಾಯಿಗಳನ್ನು ತಲುಪಿದೆ!.
ಮಾರುಕಟ್ಟೆ ಸ್ಥಾನಮಾನ ಪ್ರಮುಖ ಬ್ರ್ಯಾಂಡ್ ಕ್ವಿಕ್ ಕಾಮರ್ಸ್‌ನಲ್ಲಿ ನಂ.1 ಸ್ಥಾನ ಕರ್ನಾಟಕದ ಹೆಮ್ಮೆ, ಸ್ವದೇಶಿ ಬ್ರ್ಯಾಂಡ್‌ನ ಶಕ್ತಿ.
ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಪ್ರಥಮ ಸ್ಥಾನಕ್ಕೇರಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ತಂತ್ರಜ್ಞಾನ ಯುಗದಲ್ಲೂ ಸಾಂಪ್ರದಾಯಿಕ ಸ್ವದೇಶಿ ಬ್ರ್ಯಾಂಡ್ ಸೃಷ್ಟಿಸಿರುವ ಈ ಇತಿಹಾಸ, ಜಾಗತಿಕ ಕಂಪನಿಗಳ ಪೈಪೋಟಿಯ ನಡುವೆಯೂ ಗ್ರಾಹಕರಲ್ಲಿ ಮೈಸೂರ್ ಸ್ಯಾಂಡಲ್ ಸೋಪಿಗೆ ಇರುವ ಅಪಾರ ನಂಬಿಕೆ ಮತ್ತು ಕ್ರೇಜ್‌ಗೆ ಸಾಕ್ಷಿಯಾಗಿದೆ.



