ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಹಾಗೂ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಯಿಂದ ಬಳಲುತ್ತಿದ್ದ ಸಾರ್ವಜನಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ. ನಮ್ಮ ಮೆಟ್ರೋ ‘ಗುಲಾಬಿ ಮಾರ್ಗ’ದ (ಪಿಂಕ್ ಲೈನ್) ಪ್ರಥಮ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಉದ್ಘಾಟನೆಗೆ ದಿನಾಂಕ ನಿಗದಿಯಾದರೆ ಇದೇ ಸೆಪ್ಟೆಂಬರ್ ತಿಂಗಳಾಂತ್ಯದಲ್ಲೇ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಲೋಕೋ ಪೈಲಟ್ ಕ್ಯಾಬಿನ್‌ನಲ್ಲಿ ಪ್ರಯಾಣಿಸಿ ಸಚಿವರು, ಸಂಸದರಿಂದ ಪರಿಶೀಲನೆ:
ಬುಧವಾರ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಕೃಷ್ಣಪ್ಪ ಅವರು ಜಂಟಿಯಾಗಿ ಪರಿಶೀಲನೆ ನಡೆಸಿದರು. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ನಾಯಕರು, ನಿಲ್ದಾಣದ ಭದ್ರತೆ, ಪ್ರಯಾಣಿಕರ ಸೌಲಭ್ಯ ಹಾಗೂ ಸಂಚಾರ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ, ಸಚಿವರು ಹಾಗೂ ಸಂಸದರು ಮೆಟ್ರೋ ಲೋಕೋ ಪೈಲಟ್ ಕ್ಯಾಬಿನ್‌ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಪ್ರಯಾಣ ಬೆಳೆಸಿ, ಮಾರ್ಗದ ಕಾಮಗಾರಿಯ ಗುಣಮಟ್ಟವನ್ನು ಹತ್ತಿರದಿಂದ ವೀಕ್ಷಿಸಿದರು.
ಮೊದಲ ಹಂತದಲ್ಲಿ 7.5 ಕಿ.ಮೀ. ಮಾರ್ಗ ಮುಕ್ತ:
ಉದ್ಘಾಟನೆಯ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ (ಬನ್ನೇರುಘಟ್ಟ ರಸ್ತೆ) ತಾವರೆಕೆರೆಯವರೆಗಿನ 7.5 ಕಿ.ಮೀ. ಉದ್ದದ ಮಾರ್ಗವು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
ಮೊದಲ ಹಂತದಲ್ಲಿ ಸಂಚರಿಸಲಿರುವ ಪ್ರಮುಖ ನಿಲ್ದಾಣಗಳು:
ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮಾರ್ಗದೊಂದಿಗೆ ಇಂಟರ್‌ಚೇಂಜ್), ತಾವರೆಕೆರೆ.
ಎರಡನೇ ಹಂತದಲ್ಲಿ ಬರಲಿರುವ ಭೂಗತ ಹಾಗೂ ಮೇಲ್ಸೇತುವೆ ನಿಲ್ದಾಣಗಳು: ಡೈರಿ ವೃತ್ತ, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ (ನೇರಳೆ ಮಾರ್ಗದೊಂದಿಗೆ ಇಂಟರ್‌ಚೇಂಜ್), ಶಿವಾಜಿನಗರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಹಾಗೂ ನಾಗವಾರ (ನೀಲಿ ಮಾರ್ಗದೊಂದಿಗೆ ಇಂಟರ್‌ಚೇಂಜ್).
ನಗರದ ಪ್ರಮುಖ ಜಂಕ್ಷನ್‌ಗಳ ಬೆಸುಗೆ: ಈ ಪಿಂಕ್ ಲೈನ್ ಮಾರ್ಗವು ಬೆಂಗಳೂರಿನ ಇತರ ಪ್ರಮುಖ ಮೆಟ್ರೋ ಮಾರ್ಗಗಳೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ಗಳನ್ನು ಹೊಂದಿರಲಿದೆ.
ಜಯದೇವ ಜಂಕ್ಷನ್: ಹಳದಿ ಮಾರ್ಗ (ಯೆಲ್ಲೋ ಲೈನ್), ಎಂ.ಜಿ. ರಸ್ತೆ: ನೇರಳೆ ಮಾರ್ಗ (ಪರ್ಪಲ್ ಲೈನ್), ನಾಗವಾರ: ನೀಲಿ ಮಾರ್ಗ (ಏರ್‌ಪೋರ್ಟ್ ಸಂಪರ್ಕ ಮಾರ್ಗ).
15 ದಿನಗಳಲ್ಲಿ ಸಿಎಂಆರ್‌ಎಸ್ ಸುರಕ್ಷತಾ ಅನುಮೋದನೆ:
ಪರಿಶೀಲನೆ ಬಳಿಕ ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ, "ಸೆಪ್ಟೆಂಬರ್ ಅಂತ್ಯದೊಳಗೆ ಈ ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಈ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರೊಂದಿಗೆ ಚರ್ಚಿಸಲಾಗಿದ್ದು, ಮುಂದಿನ 15 ದಿನಗಳಲ್ಲಿ ರೋಲಿಂಗ್ ಸ್ಟಾಕ್ (ರೈಲು ಬೋಗಿಗಳ) ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ತದನಂತರ ಸಂಪೂರ್ಣ ಮಾರ್ಗಕ್ಕೆ ಅಗತ್ಯ ಸುರಕ್ಷತಾ ಪ್ರಮಾಣಪತ್ರ ಸಿಗಲಿದೆ," ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದೊಂದಿಗೆ ನಿಕಟ ಸಮನ್ವಯ ಸಾಧಿಸಿ ಆದಷ್ಟು ಬೇಗ ಎಲ್ಲಾ ಅನುಮೋದನೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ ಅವರು, ಈ ಹೊಸ ಮಾರ್ಗವು ಬನ್ನೇರುಘಟ್ಟ ರಸ್ತೆಯ ಭೀಕರ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿದ್ದು, ನಗರದ ಸಮೂಹ ಸಾರಿಗೆ ಜಾಲಕ್ಕೆ ಹೊಸ ಬಲ ತರಲಿದೆ ಎಂದರು.




