ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ ಹೆಮ್ಮೆಯ ಮೊದಲ ಪ್ರಧಾನಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 62ನೇ ಪುಣ್ಯಸ್ಮರಣೆಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಆವರಣದಲ್ಲಿರುವ ನೆಹರೂ ಅವರ ಪುತ್ಥಳಿ ಬಳಿ, ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಭಾವಪೂರ್ಣ ಗೌರವ ನಮನ ಸಲ್ಲಿಸಿದರು.
ರಾಷ್ಟ್ರನಿರ್ಮಾತೃ ನೆಹರೂ ಅವರ ಕೊಡುಗೆಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ದೇಶದ ಪ್ರಗತಿಗೆ ಅವರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಕೃತಜ್ಞತೆಯಿಂದ ನೆನೆದರು.
ದೇಶದ ಪ್ರಗತಿಗೆ ವೈಜ್ಞಾನಿಕ ಹಾದಿ
ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಪ್ರಧಾನಿಯಾಗಿ ನೆಹರೂ ಅವರು ಸತತ 17 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಸಮಾಜವಾದಿ ಮತ್ತು ಮಿಶ್ರ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಡತನ ನಿರ್ಮೂಲನೆ ಹಾಗೂ ಕೈಗಾರಿಕಾ ಕ್ರಾಂತಿಗೆ ಕಾರಣರಾದರು.
ದೇಶದಲ್ಲಿ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಶಿಕ್ಷಣದ ಆಧುನೀಕರಣ ಮತ್ತು ಸಹಕಾರ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ" ಎಂದು ಶ್ಲಾಘಿಸಿದರು.
ಪಂಚವಾರ್ಷಿಕ ಯೋಜನೆಗಳ ಕೊಡುಗೆ
"ದೇಶದ ಪ್ರಗತಿಯನ್ನು ವೈಜ್ಞಾನಿಕವಾಗಿ ಸಾಧಿಸುವ ದೃಷ್ಟಿಯಿಂದ ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅವರು ನಮ್ಮನ್ನು ಅಗಲಿ ಇಂದಿಗೆ 62 ವರ್ಷಗಳಾಗಿವೆ.
ಈ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಾವು ನೆಹರೂರವರನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತೇವೆ. ಅವರ ಆದರ್ಶಗಳು ಸದಾ ನಮಗೆ ಮೇಲ್ಪಂಕ್ತಿಯಾಗಿದ್ದು, ಅವರ ಹಾದಿಯಲ್ಲಿ ನಡೆಯುವ ಪ್ರಾೂಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತೇವೆ" ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ|| ಶಾಲಿನಿ ರಜನೀಶ್ ಸೇರಿದಂತೆ ಹಲವು ಪ್ರಮುಖರು, ರಾಜಕೀಯ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಭಾರತದ ಮೊದಲ ಪ್ರಧಾನಿಗೆ ಪುಷ್ಪ ನಮನ ಸಲ್ಲಿಸಿದರು.



