ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಜನರಿಗೆ ಈಗಾಗಲೇ ಇರುವ ತೆರಿಗೆಗಳ ಜೊತೆಗೆ ಆಸ್ತಿ ಖಾತೆ ನೋಂದಾಯಿಸಿಕೊಳ್ಳಲು ಹೊಸದಾಗಿ 'ಸಾಫ್ಟ್‌ವೇರ್ ಶುಲ್ಕ'ದ ಹೆಸರಿನಲ್ಲಿ ಮತ್ತೊಂದು ಕತ್ತರಿ ಪ್ರಯೋಗಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ.
ಬೊಕ್ಕಸ ಖಾಲಿ ಮಾಡಿಕೊಂಡು 'ಕಾಗದದ ಸರ್ಕಾರ'ವಾಗಿ ಮಾರ್ಪಟ್ಟಿರುವ ಸರ್ಕಾರ, ಸಾರ್ವಜನಿಕರ ಜೇಬಿಗೆ ಕನ್ನ ಹಾಕಲು ಈಗ 'ಸಾಫ್ಟ್‌ವೇರ್ ಶುಲ್ಕ' ಎಂಬ ಹೊಸ ಸುಲಿಗೆಯ ಮಾರ್ಗವನ್ನು ಕಂಡುಹಿಡಿದಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಸಾಫ್ಟ್‌ವೇರ್ ನಿರ್ಮಾಣ ಮತ್ತು ನಿರ್ವಹಣಾ ವೆಚ್ಚವನ್ನು ನೇರವಾಗಿ ಆಸ್ತಿ ಮಾಲೀಕರ ಜೇಬಿನಿಂದಲೇ ವಸೂಲಿ ಮಾಡಲು ಹೊರಟಿರುವುದು ಖಂಡನೀಯ ಎಂದಿದ್ದಾರೆ.
ಸಾಫ್ಟ್‌ವೇರ್ ಹೆಸರಿನಲ್ಲಿ ನಡೆಯುತ್ತಿರುವ ಅಧಿಕೃತ ಲೂಟಿ ಪಟ್ಟಿ:
ಸರ್ಕಾರ ವಿವಿಧ ಸೇವೆಗಳ ಮೇಲೆ ವಿಧಿಸಿರುವ ಸಾಫ್ಟ್‌ವೇರ್ ಶುಲ್ಕದ ವಿವರಗಳನ್ನು ಆರ್. ಅಶೋಕ್ ಬಹಿರಂಗಪಡಿಸಿದ್ದಾರೆ.
ಆಸ್ತಿ ತೆರಿಗೆ ಸೇವೆಗಳು: ರೂ. 200 ರಿಂದ ರೂ. 1,000
ಇ-ಖಾತೆ ಅಂತಿಮಗೊಳಿಸುವ ಪ್ರಕ್ರಿಯೆ: ರೂ. 400
ಬಿ-ಖಾತೆಯಿಂದ ಎ-ಖಾತೆಗೆ ಬದಲಾವಣೆ: ರೂ. 2,000 ರಿಂದ ರೂ. 10,000 ಹೊಸ ಖಾತೆ ನೋಂದಣಿ: ರೂ. 2,000 ರಿಂದ ರೂ. 10,000
ಲೇಔಟ್ ಖಾತೆ ಸೇವೆ: ತಲಾ ನಿವೇಶನಕ್ಕೆ ರೂ. 10,000
ಇ-ಖಾತೆ ಮರು ಹಂಚಿಕೆ: ಪ್ರತಿ ದಾಖಲೆಗೆ ರೂ. 50
ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ಜನತೆ ಈಗಾಗಲೇ ಅದಕ್ಕಾಗಿ ಸಾಕಷ್ಟು ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಹೀಗಿರುವಾಗ ಸಾಫ್ಟ್‌ವೇರ್ ನಿರ್ವಹಣೆಯ ನೆಪದಲ್ಲಿ ಪ್ರತಿಯೊಂದು ಸೇವೆಗೂ ಮತ್ತೆ ಸಾವಿರಾರು ರೂ. ವಸೂಲಿ ಮಾಡುವುದು ಯಾವ ರೀತಿಯ ಆಡಳಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಅವರು ಪ್ರಶ್ನಿಸಿದ್ದಾರೆ.
ಸಾಫ್ಟ್‌ವೇರ್ ಅಭಿವೃದ್ಧಿಗೆ ಎಷ್ಟು ಖರ್ಚಾಗಿದೆ ಮತ್ತು ಇದರ ಮೂಲಕ ಎಷ್ಟು ಕೋಟಿ ರೂ. ಲೂಟಿ ಮಾಡಲು ಯೋಜಿಸಲಾಗಿದೆ ಎಂಬ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು. ಡಿಜಿಟಲ್ ಆಡಳಿತ ಎಂದರೆ ಜನರಿಗೆ ಉತ್ತಮ ಸೇವೆ ನೀಡುವುದೇ ಹೊರತು, ಸಾಫ್ಟ್‌ವೇರ್ ಹೆಸರಿನಲ್ಲಿ ಸುಲಿಗೆ ಮಾಡುವುದಲ್ಲ ಎಂದು ಎಚ್ಚರಿಸಿರುವ ಅವರು, ತಕ್ಷಣವೇ ಈ ಅನ್ಯಾಯದ 'ಸಾಫ್ಟ್‌ವೇರ್ ಶುಲ್ಕ' ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.




