ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಯೋಜನೆಯು ಕುಮಾರಸ್ವಾಮಿ ಅಥವಾ ಹೆಚ್.ಡಿ. ದೇವೇಗೌಡರ ಕೂಸು ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಇದು 2ಜಿ ಮತ್ತು ಕಲ್ಲಿದ್ದಲು ಹಗರಣಗಳಿಗಿಂತಲೂ ದೊಡ್ಡ ಹಗರಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
‘ನಥಿಂಗ್ ನೈಸ್’ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಯೋಜನೆ ಹೆಸರಿನಲ್ಲಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಈ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಡಿಕೆ ಶಿವಕುಮಾರ್ ಅವರಿಗೆ ಅವರು ಸವಾಲು ಹಾಕಿದ್ದಾರೆ.
ಮೂಲ ಒಪ್ಪಂದದ ವಿವರ: 1995ರ ನವೆಂಬರ್ 8ರಂದು ಅಮೆರಿಕದ ವಿಹೆಚ್ ವಿ ಕಂಪನಿ, ಕಲ್ಯಾಣಿ ಹಾಗೂ SAB ಕಂಪನಿಗಳ ಜೊತೆ ಎಂಒಯು (MOU) ಆಗಿತ್ತು. 1997ರ ಏಪ್ರಿಲ್ 3ರಂದು ಎಫ್ಡಬ್ಲ್ಯೂಎ ಒಪ್ಪಂದವಾಯಿತು. ಆರಂಭದಲ್ಲಿ ಕೃಷಿಗೆ ಉತ್ತಮವಾದ ಭೂಮಿ ಹಾಗೂ ಕೆರೆ ಜಾಗ ಬಳಸಬಾರದು, ಕೇವಲ ಒಣ ಭೂಮಿಯನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ತೀರ್ಮಾನಿಸಲಾಗಿತ್ತು.
ಒಪ್ಪಂದಗಳ ಬದಲಾವಣೆ ಮತ್ತು ಅಕ್ರಮ ಆರೋಪ: 1999ರಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಪ್ರೇಮ್ವರ್ಕ್ ಅಗ್ರಿಮೆಂಟ್ಗೆ ಒಪ್ಪಿಕೊಳ್ಳಲಾಗಿತ್ತು. ಆದರೆ ನಂತರ ನಂದಿ ಎಕಾನಾಮಿಕ್ ಕಾರಿಡಾರ್ ಹೆಸರಿನಲ್ಲಿ 2002ರ ಆಗಸ್ಟ್ನಲ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಾಯಿತು.
ಡಿಕೆಶಿ ಮತ್ತು ಅಶೋಕ್ ಕೇಣಿ ನಂಟು: 2003ರ ಮೇ 21ರಂದು ಅಂದಿನ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಯಿತು. ಈ ಇಬ್ಬರೂ (ಅಶೋಕ್ ಕೇಣಿ ಮತ್ತು ಡಿಕೆ ಶಿವಕುಮಾರ್) ಯೋಜನೆ ಹೆಸರಲ್ಲಿ ಅಕ್ರಮ ಎಸಗಿದ್ದು, ಟೌನ್ಶಿಪ್ಜಾಗವನ್ನು ಕಡಿಮೆ ಮಾಡಿ ಟೋಲ್ ರಸ್ತೆ ಜಾಗವನ್ನು ಹೆಚ್ಚಿಸಿದ್ದಾರೆ ಎಂದು ಹೆಚ್ಡಿಕೆ ದೂರಿದ್ದಾರೆ.
ತ್ರಿಪಾರ್ಟಿ ಅಗ್ರಿಮೆಂಟ್ ವಿವಾದ: ಜೆ.ಎಚ್. ಪಟೇಲ್ ಮತ್ತು ಹೆಚ್.ಡಿ. ದೇವೇಗೌಡರಿಗೆ ರಾಜ್ಯದ ಅಭಿವೃದ್ಧಿಗೆ ಯೋಜನೆ ಬೇಕಿತ್ತೇ ಹೊರತು ಯಾವುದೇ ತಪ್ಪಿರಲಿಲ್ಲ. 1998ರಲ್ಲಿ ಸುಪ್ರೀಂಕೋರ್ಟ್ ಸಹ ಪ್ರೇಮ್ವರ್ಕ್ ಅಗ್ರಿಮೆಂಟ್ ಅಂತಿಮ ಎಂದು ಹೇಳಿತ್ತು. ಆದರೆ 2004ರಲ್ಲಿ ನೈಸ್, ನೇಸ್ ಹಾಗೂ ರಾಜ್ಯ ಸರ್ಕಾರದ ನಡುವೆ ತ್ರಿಪಾರ್ಟಿ ಅಗ್ರಿಮೆಂಟ್ ಮಾಡಿ ನಿಯಮಗಳನ್ನು ಬದಲಾಯಿಸಲಾಯಿತು ಎಂದು ಕುಮಾರಸ್ವಾಮಿ ದಾಖಲೆಗಳ ಸಮೇತ ಆರೋಪಿಸಿದರು.




