ಚಂದ್ರವಳ್ಳಿ ನ್ಯೂಸ್, ಹರಿಹರ:
ಬೆಳೆ ಹಾನಿಯಿಂದ ಕಂಗಾಲಾಗಿರುವ ಅನ್ನದಾತನ ಕಣ್ಣೀರು ಒರೆಸಲು ಮತ್ತು ರೈತರ ಹಕ್ಕುಗಳಿಗಾಗಿ ಧ್ವನಿ ಎತ್ತಲು ಜಾತ್ಯತೀತ ಜನತಾದಳ (ಜೆಡಿಎಸ್) ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ‘ರೈತ ಸ್ವಾಭಿಮಾನ ಯಾತ್ರೆ’ಗೆ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ತೋಮ ಹರಿದುಬಂದಿದೆ.
ಯಾತ್ರೆಯ ಅಂಗವಾಗಿ ಹರಿಹರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಭಾನುವಳ್ಳಿ, ದೇವರಬೆಳಕೆರೆ, ಕೆ.ಬೇವನಹಳ್ಳಿ ಹಾಗೂ ಬನ್ನಿಕೋಡು ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.
ದೇವರಬೆಳಕೆರೆ ಗ್ರಾಮದ ಪ್ರವೀಣ್ ಮತ್ತು ಮಹೇಶಪ್ಪ ಎಂಬ ರೈತರ ಜಮೀನಿನಲ್ಲಿ ಮಳೆಯಿಲ್ಲದೆ ಕಳೆಗುಂದಿದ ಮೆಕ್ಕೆಜೋಳ ಬೆಳೆಯನ್ನು ವೀಕ್ಷಿಸಿದ ನಿಖಿಲ್, ಸಂಕಷ್ಟದಲ್ಲಿರುವ ರೈತರ ಅಳಲನ್ನು ಆಲಿಸಿದರು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಹರಿಹರಕ್ಕೆ ಆಗಮಿಸಿದ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಪ್ರಸಿದ್ಧ ಮಿಟ್ಲಕಟ್ಟೆಯ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಹಾಗೂ ದೇವರಬೆಳಕೆರೆ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಜನತೆಗೆ ಒಳಿತಾಗಲಿ ಹಾಗೂ ರೈತ ಸಮುದಾಯಕ್ಕೆ ಸಮೃದ್ಧಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ರಾತ್ರಿಯಾದರೂ ಕಮ್ಮಿಯಾಗದ ಉತ್ಸಾಹ: ಸುಡುಬಿಸಿಲನ್ನೂ ಲೆಕ್ಕಿಸದೆ ನಡೆದ ಈ ಯಾತ್ರೆಯಲ್ಲಿ, ರಾತ್ರಿಯಾದರೂ ಜನಸಂದಣಿ ಕಮ್ಮಿಯಾಗಲಿಲ್ಲ. ಭಾನುವಳ್ಳಿ ಹಾಗೂ ಬನ್ನಿಕೋಡು ಗ್ರಾಮಗಳಲ್ಲಿ ತಡರಾತ್ರಿಯಾದರೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರು ಮತ್ತು ಯುವಕರು ನಿಖಿಲ್ ಕುಮಾರಸ್ವಾಮಿ ಅವರಿಗೆ ಭವ್ಯ ಸ್ವಾಗತ ಕೋರಿ, ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ನಿರಂತರ ಹೋರಾಟದ ಎಚ್ಚರಿಕೆ:
ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು, ನಿಮಗಾಗಿ ನಾವೆಲ್ಲರೂ ಇದ್ದೇವೆ. ಬರಪೀಡಿತ ಪ್ರದೇಶದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವವರೆಗೆ ಮತ್ತು ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಈ ಸರ್ಕಾರದ ವಿರುದ್ಧ ನಮ್ಮ ಧ್ವನಿ ನಿರಂತರವಾಗಿರುತ್ತದೆ" ಎಂದು ಭರವಸೆ ನೀಡಿದರು.
ಯಾತ್ರೆಯ ಯಶಸ್ಸಿಗೆ ಶ್ರಮಿಸಿದ ಹರಿಹರ ಕ್ಷೇತ್ರದ ಅನ್ನದಾತರಿಗೆ, ಪಕ್ಷದ ನಾಯಕರಿಗೆ ಹಾಗೂ ಬೆಂಬಲಿಗರಿಗೆ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಈ ವೇಳೆ ಮಾಜಿ ಶಾಸಕ ಶಿವಶಂಕರ್ ಸೇರಿದಂತೆ ಜೆಡಿಎಸ್ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.




