ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೆಸ್ಕಾಂ ಹಿರಿಯೂರು ವಿಭಾಗ ವ್ಯಾಪ್ತಿಯಲ್ಲಿ ‘ಅಕ್ರಮ-ಸಕ್ರಮ’ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ ಫಲಾನುಭವಿಗಳಿಂದ ಯಾರಾದರೂ ಹಣದ ಬೇಡಿಕೆ ಇಟ್ಟರೆ ಯಾವುದೇ ಕಾರಣಕ್ಕೂ ಹಣ ನೀಡಬಾರದು ಎಂದು ಹಿರಿಯೂರು ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಹೆಂಡೆಗಾರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿರಿಯೂರು ವಿಭಾಗ ವ್ಯಾಪ್ತಿಯ ಹಿರಿಯೂರು, ಚಳ್ಳಕೆರೆ, ತಳಕು ಮತ್ತು ಮೊಳಕಾಲ್ಮುರು ಉಪ-ವಿಭಾಗಗಳಲ್ಲಿ 10,000 ದಂಡ ಹಾಗೂ ಠೇವಣಿ ಮೊತ್ತಗಳನ್ನು ಪಾವತಿಸಿರುವ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಜೇಷ್ಠತಾ ಪಟ್ಟಿವಾರು ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಫಲಾನುಭವಿ ರೈತರಿಂದ ಯಾರಾದರೂ ಅಕ್ರಮವಾಗಿ ಹಣದ ಬೇಡಿಕೆ ಇಟ್ಟಲ್ಲಿ, ಸಾರ್ವಜನಿಕರು ಹಾಗೂ ರೈತರು ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಥವಾ ಸೂಕ್ತ ಮುನ್ನೆಚ್ಚರಿಕೆ ಹಾಗೂ ಮಾರ್ಗದರ್ಶನಕ್ಕಾಗಿ ತಕ್ಷಣವೇ ಮುಖತಃ ಹಿರಿಯೂರು ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.




